ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ರಾಜೀನಾಮೆ, ಹೈಕೋರ್ಟ್‌ನಿಂದ ಸಿಬಿಐ ತನಿಖೆಗೆ ಆದೇಶ‌

ಗೃಹ ಸಚಿವರ ವಿರುದ್ಧ ಪರಂಬೀರ್‌ ಸಿಂಗ್‌ ಮಾಡಿದ್ದ ಆರೋಪದ ಬಗ್ಗೆ 15 ದಿನಗಳ ಒಳಗೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಹೈಕೋರ್ಟ್‌ ಸೂಚನೆ ನೀಡಿದ ಬೆನ್ನಿಗೆ ಅನಿಲ್‌ ದೇಶ್‌ಮುಖ್‌ ರಾಜೀನಾಮೆ ಘೋಷಿಸಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ರಾಜೀನಾಮೆ, ಹೈಕೋರ್ಟ್‌ನಿಂದ ಸಿಬಿಐ ತನಿಖೆಗೆ ಆದೇಶ‌
Linkup
ಮುಂಬಯಿ: ನೈತಿಕ ಹೊಣೆ ಹೊತ್ತು ಗೃಹ ಸಚಿವ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬಯಿ ಮಾಜಿ ಪೊಲೀಸ್‌ ಆಯುಕ್ತ ಲಂಚ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ಸಿಬಿಐಗೆ ಸೂಚನೆ ನೀಡುತ್ತಿದ್ದಂತೆ ಅವರು ರಾಜೀನಾಮೆ ನಿರ್ಧಾರ ಘೋಷಿಸಿದ್ದಾರೆ. 15 ದಿನಗಳ ಒಳಗೆ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಹೈಕೋರ್ಟ್‌ ಸೂಚನೆ ನೀಡಿದೆ. ಈ ಹಿಂದೆ ರಾಜೀನಾಮೆಗೆ ನಿರಾಕರಿಸಿದ್ದ ಅನಿಲ್‌ ದೇಶ್‌ಮುಖ್‌ ತಾವೇನೂ ತಪ್ಪು ಮಾಡಿಲ್ಲ ಎಂದು ವಾದಿಸಿದ್ದರು. ಆದರೆ, “ಈಗ ಅವರ ವಿರುದ್ಧ ತನಿಖೆ ನಡೆಸಲಿದೆ. ಹೀಗಾಗಿ ಅವರು ಹುದ್ದೆಯಲ್ಲಿ ಮುಂದುವರಿಯುವುದು ಸಮಂಜಸವಲ್ಲ,” ಎಂದು ದೇಶ್‌ಮುಖ್‌ ಅವರ ಪಕ್ಷ ಎನ್‌ಸಿಪಿ ಹೇಳಿದೆ.

ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಹೊರಗೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣದ ನಂತರ ಮುಂಬಯಿ ಪೊಲೀಸ್‌ ಆಯುಕ್ತರಾಗಿದ್ದ ಪರಂಬೀರ್‌ ಸಿಂಗ್‌ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದಾದ ಬಳಿಕ ಸಿಎಂ ಉದ್ಧವ್‌ ಠಾಕ್ರೆಗೆ ಪತ್ರ ಬರೆದಿದ್ದ ಸಿಂಗ್‌, ಗೃಹ ಸಚಿವರು ಸಚಿನ್‌ ವಾಜೆ ಮೂಲಕ ತಿಂಗಳಿಗೆ 100 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಿದ್ದರು ಎಂದು ಆರೋಪಿಸಿದ್ದರು. ಹೈಕೋರ್ಟ್‌ ಆದೇಶದ ನಂತರ ಪ್ರತಿಕ್ರಿಯೆ ನೀಡಲು ಪರಂಬೀರ್‌ ಸಿಂಗ್‌ ನಿರಾಕರಿಸಿದ್ದಾರೆ. ಈ ಹಿಂದೆ ಅವರು ಇದೇ ಆರೋಪ ಸಂಬಂಧ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕೋರ್ಟ್‌ ಪ್ರಕರಣದಲ್ಲಿ ಯಾಕೆ ಎಫ್‌ಐಆರ್‌ ದಾಖಲಿಸಿಲ್ಲ ಎಂದು ಸಿಂಗ್‌ ಅವರನ್ನು ಪ್ರಶ್ನಿಸಿತ್ತು. ಜತೆಗೆ ಹೈಕೋರ್ಟ್‌ ಮೊರೆ ಹೋಗುವಂತೆ ಹೇಳಿತ್ತು.