ಸೋಮವಾರದಿಂದ ಸಂಸತ್‌ನ ಚಳಿಗಾಲದ ಅಧಿವೇಶನ, 37 ವಿಧೇಯಕ ಮಂಡನೆಗೆ ಸರಕಾರದ ಸಿದ್ಧತೆ

ಸಂಸತ್‌ನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಸರಕಾರ ನೂತನ ಕೃಷಿ ಕಾಯಿದೆಗಳನ್ನು ರದ್ದುಪಡಿಸುವ ವಿಧೇಯಕ ಮಂಡನೆಗೆ ಸಿದ್ಧತೆ ನಡೆಸಿದ್ದರೆ, ಪೆಗಾಸಸ್‌, ಚೀನಾ ಅತಿಕ್ರಮಣ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ಸೋಮವಾರದಿಂದ ಸಂಸತ್‌ನ ಚಳಿಗಾಲದ ಅಧಿವೇಶನ, 37 ವಿಧೇಯಕ ಮಂಡನೆಗೆ ಸರಕಾರದ ಸಿದ್ಧತೆ
Linkup
ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಮೊದಲ ದಿನವೇ ಸರಕಾರ ನೂತನ ಕೃಷಿ ಕಾಯಿದೆಗಳನ್ನು ರದ್ದುಪಡಿಸುವ ವಿಧೇಯಕ ಮಂಡನೆಗೆ ಸಿದ್ಧತೆ ನಡೆಸಿದೆ. ಪೆಗಾಸಸ್‌, ಚೀನಾ ಅತಿಕ್ರಮಣ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಡಿಸೆಂಬರ್‌ 23ರವರೆಗೆ ನಡೆಯಲಿದ್ದು, ಒಟ್ಟು 20 ದಿನಗಳ ಕಲಾಪ ನಡೆಯಲಿದೆ. 37 ವಿಧೇಯಕಗಳ ಮಂಡನೆಗೆ ಸರಕಾರದ ಸಿದ್ಧತೆ ನಡೆಸಿದೆ. ಈ ಮಧ್ಯೆ, ಅಧಿವೇಶನಕ್ಕೆ ಪೂರ್ವಭಾವಿಯಾಗಿ ಭಾನುವಾರ ಸರ್ವಪಕ್ಷ ಸಭೆ ನಡೆಯಿತು. ಪ್ರಧಾನಿ ಮೋದಿ ಅವರು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರು. ಸರ್ವಪಕ್ಷ ಸಭೆ ಸರಕಾರ-ಪ್ರತಿಪಕ್ಷಗಳ ನಡುವೆ ಬಿರುಸಿನ ವಾಗ್ವಾದಕ್ಕೆ ಸಾಕ್ಷಿಯಾಯಿತು. ಪ್ರಧಾನಿ ಸಭೆಗೆ ಗೈರಾಗಿದ್ದನ್ನು ಪ್ರಶ್ನಿಸಿದ ಪ್ರತಿಪಕ್ಷಗಳಿಗೆ, "ಸರ್ವಪಕ್ಷ ಸಭೆಗೆ ಪ್ರಧಾನಿ ಹಾಜರಾಬೇಕು ಎನ್ನುವ ನಿಯಮ ಇಲ್ಲ. ಅದು 'ಸಂಪ್ರದಾಯ'ವೂ ಅಲ್ಲ," ಎಂದು ಸರಕಾರ ಸಮಜಾಯಿಷಿ ನೀಡಿತು. "ವಿವಾದಗ್ರಸ್ತ ಕೃಷಿ ಕಾಯಿದೆಗಳನ್ನು ರದ್ದುಗೊಳಿಸುವುದಾಗಿ ಸರಕಾರ ಭರವಸೆ ನೀಡಿದ ಬಳಿಕವೂ ರೈತರು ಪ್ರತಿಭಟನೆ ನಿಲ್ಲಿಸಿಲ್ಲ. ಅವರು ಎಂಎಸ್‌ಪಿ ಖಾತ್ರಿಗೆ ಒತ್ತಾಯಿಸಿದ್ದಾರೆ. ಅದಕ್ಕೆ ಸರಕಾರ ಏನು ಕ್ರಮ ಕೈಗೊಂಡಿದೆ? ಉತ್ತರಪ್ರದೇಶದ ಲಖೀಮ್‌ಪುರ ಖೇರಿ ಘಟನೆಯ ಕಳಂಕಿತ ಕೇಂದ್ರ ಸಚಿವ ಅಜಯ್‌ ಮಿಶ್ರಾ ತೇಣಿ ಅವರನ್ನು ಸಂಪುಟದಿಂದ ಏಕೆ ಕೈಬಿಟ್ಟಿಲ್ಲ,'' ಎನ್ನುವ ಪ್ರಶ್ನೆಗಳನ್ನು ಪ್ರತಿಪಕ್ಷ ಮುಖಂಡರು ಎತ್ತಿದರು. ಸರ್ವಪಕ್ಷ ಸಭೆಗೆ ಪ್ರಧಾನಿ ಗೈರಾದದ್ದು ಯಾಕೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು. ಇದಕ್ಕೆ ತಕ್ಷಣ ಉತ್ತರ ನೀಡಿದ ಸಚಿವರುಗಳು, "ಸರ್ವಪಕ್ಷ ಸಭೆಗೆ ಪ್ರಧಾನಿ ಹಾಜರಾಗುವ ಸಂಪ್ರದಾಯ ಶುರು ಮಾಡಿದ್ದೇ ಮೋದಿ ಅವರು. ಹಿಂದಿನ ಯಾವ ಪ್ರಧಾನಿ ಕೂಡ ಸರ್ವಪಕ್ಷ ಸಭೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಇದೊಂದು ಔಪಚಾರಿಕ ಸಭೆ ಎಂದೇ ಪರಿಗಣಿಸಲಾಗುತ್ತಿತ್ತು. ಮೋದಿ ಅವರು ಮೊದಲ ಬಾರಿ ಸಭೆಗೆ ಘನತೆ ತಂದರು. ಖುದ್ದು ಹಾಜರಾಗಿ ಸತ್ಸಂಪ್ರದಾಯ ಆರಂಭಿಸಿದರು. ಅವರು ಹಾಕಿದ ಸಂಪ್ರದಾಯವನ್ನೇ ಈಗ ಪ್ರತಿಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಇದು ಹಾಸ್ಯಾಸ್ಪದ,'' ಎಂದು ತಿರುಗೇಟು ನೀಡಿದರು. ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಅಧೀರ್‌ ರಂಜನ್‌ ಚೌಧರಿ ಸೇರಿದಂತೆ 30 ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಅಧಿವೇಶನದ ಮೊದಲ ದಿನ ವಾಪಸ್‌ ವಿಧೇಯಕ ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸುವ ವಿಧೇಯಕವನ್ನು ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರವೇ ಸಂಸತ್‌ನಲ್ಲಿ ಮಂಡಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಉತ್ತರಪ್ರದೇಶ, ಪಂಜಾಬ್‌ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದ್ದು, ಇಂತಹ ಸಂದರ್ಭದಲ್ಲಿ ಅನಗತ್ಯ ವಿವಾದ ಮೈಮೇಲೆ ಎಳೆದುಕೊಳ್ಳದಿರಲು ಬಿಜೆಪಿ ನಿರ್ಧರಿಸಿದೆ. ಹೀಗಾಗಿ ಕೃಷಿ ಕಾಯಿದೆಗಳ ರದ್ದು ವಿಧೇಯಕವನ್ನು ಉಭಯ ಸದನಗಳಲ್ಲಿ ಅಧಿವೇಶನದ ಮೊದಲ ದಿನವೇ ಮಂಡಿಸಿ, ಪ್ರತಿಭಟನಾನಿರತ ರೈತ ಸಂಘಟನೆಗಳನ್ನು ಸಮಾಧಾನಪಡಿಸುವುದು ಸರಕಾರದ ಉದ್ದೇಶವಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ನೂತನ ವಿಧೇಯಕ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿಅಧಿವೇಶನದ ಮೊದಲ ದಿನ ಕಡ್ಡಾಯವಾಗಿ ಹಾಜರಿರುವಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ತಮ್ಮ ಸಂಸದರಿಗೆ ವಿಪ್‌ ಜಾರಿಗೊಳಿಸಿವೆ. ಪಂಜಾಬ್‌ನಲ್ಲಿ ಶುರುವಾದ ನೂತನ ಕೃಷಿ ಕಾಯಿದೆ ವಿರೋಧಿ ಪ್ರತಿಭಟನೆ ಹರಿಯಾಣ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಿಗೆ ವ್ಯಾಪಿಸಿದೆ. ಪ್ರತಿಭಟನಾನಿರತ 700 ರೈತರು ಮೃತಪಟ್ಟಿದ್ದಾರೆ. ರೈತರು ಹಲವು ಸುತ್ತಿನ ಮಾತುಕತೆಯಲ್ಲಿ ರದ್ದು ಬೇಡಿಕೆಯೊಂದನ್ನೇ ಮುಂದಿಟ್ಟು ಹಠ ಸಾಧಿಸಿದ್ದಾರೆ.