ಸಂಪತ್ತಿನ 25% ದಾನ ನೀಡಲು ಜೆರೋಧಾ ಸಂಸ್ಥಾಪಕ ನಿಖಿಲ್‌ ಕಾಮತ್‌ ಅಭಿಯಾನ

ತಮ್ಮ ಸಂಪತ್ತಿನ ಶೇ.25ರಷ್ಟು ಹಣವನ್ನು ಸಾಮಾಜಿಕ ಕಲ್ಯಾಣ ಯೋಜನೆಗೆ ನೀಡುವುದಾಗಿ ಜೆರೋಧಾ ಕಂಪನಿಯ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಘೋಷಿಸಿದ್ದು, ಈ ಸಂಬಂಧ ಅವರು ಹೊಸ ಅಭಿಯಾನವನ್ನೇ ಆರಂಭಿಸಿದ್ದಾರೆ.

ಸಂಪತ್ತಿನ 25% ದಾನ ನೀಡಲು ಜೆರೋಧಾ ಸಂಸ್ಥಾಪಕ ನಿಖಿಲ್‌ ಕಾಮತ್‌ ಅಭಿಯಾನ
Linkup
ಬೆಂಗಳೂರು: ಆರ್ಥಿಕ ಅಸಮಾನತೆಯನ್ನು ಸಾಧ್ಯವಾದಷ್ಟು ನಿವಾರಿಸುವ ನಿಟ್ಟಿನಲ್ಲಿ ಸರಕಾರದ ಜತೆಗೆ ಯುವಜನತೆಯೂ ಭಾಗವಹಿಸಬೇಕು ಎಂಬ ಉದ್ದೇಶದೊಂದಿಗೆ ಬೆಂಗಳೂರು ಮೂಲದ ಕಂಪನಿಯ ಸಹ ಸಂಸ್ಥಾಪಕರಾದ ಅವರು ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ತಮ್ಮ ಸಂಪತ್ತಿನ ಶೇ.25 ಅನ್ನು ಸಾಮಾಜಿಕ ಕಲ್ಯಾಣ ಯೋಜನೆಗೆ ನೀಡುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲದೆ 'ಯಂಗ್‌ ಇಂಡಿಯಾ ಫಿಲಾಂತ್ರೊಪಿಕ್‌ ಪ್ಲೆಡ್ಜ್‌' (ವೈಐಪಿಪಿ) ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ನಿಖಿಲ್‌ ಕಾಮತ್‌ ಅವರಿಗೆ ಸೋದರ ನಿತಿನ್‌ ಕಾಮತ್‌ ಕೂಡ ಸಾಥ್‌ ನೀಡಿದ್ದಾರೆ. ''ಇನ್ನೂ ಐವರು ಈಗಾಗಲೇ ಕೈಜೋಡಿಸಿದ್ದಾರೆ. ಈ ಪಟ್ಟಿ ವರ್ಷಾಂತ್ಯದ ವೇಳೆಗೆ ಹತ್ತಕ್ಕೆ ಏರುವ ನಿರೀಕ್ಷೆ ಇದೆ. ಇವರೆಲ್ಲರೂ ತಮ್ಮ ಸಂಪತ್ತಿನ ಶೇ.25 ಭಾಗವನ್ನು ಭವಿಷ್ಯದಲ್ಲಿಸಮಾಜಕ್ಕೆ ಧಾರೆ ಎರೆಯಲಿದ್ದಾರೆ," ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದಿಂದಲೇ ಈ ಅಭಿಯಾನ ಶುರುವಾಗಲಿದೆ. ಕಾಮತ್‌ ಸೋದರರು 2010ರಲ್ಲಿ ಆರಂಭಿಸಿದ್ದ ರಿಟೇಲ್‌ ಸ್ಟಾಕ್‌ ಬ್ರೋಕರೇಜ್‌ ಕಂಪನಿ ಜೆರೋಧಾ ಕೆಲವೇ ವರ್ಷಗಳಲ್ಲಿ ಭಾರತದಲ್ಲೇ ಈ ವಲಯದಲ್ಲಿ ಮುಂಚೂಣಿಯ ಕಂಪನಿಯಾಗಿ ಹೊರಹೊಮ್ಮಿದೆ. 'ವಿಜಯ ಕರ್ನಾಟಕ'ಕ್ಕೆ ನೀಡಿದ ಸಂದರ್ಶನದಲ್ಲಿ ನಿಖಿಲ್‌ ಕಾಮತ್‌ ಅವರು ವೈಐಪಿಪಿ ಬಗ್ಗೆ ವಿವರಿಸಿದ್ದಾರೆ. ಏನಿದು ಯಂಗ್‌ ಇಂಡಿಯಾ ಫಿಲಾಂತ್ರೊಪಿಕ್‌ ಪ್ಲೆಡ್ಜ್‌? ಭಾರತದಲ್ಲಿ ಕಳೆದ 10 ವರ್ಷದಿಂದೀಚೆಗೆ ಸಣ್ಣ ವಯಸ್ಸಿನಲ್ಲಿಯೇ ಸ್ವಂತ ಉದ್ಯಮ ಅಥವಾ ಸ್ಟಾರ್ಟಪ್‌ ಅಥವಾ ಉನ್ನತ ಉದ್ಯೋಗದ ಮೂಲಕ ಹೇರಳವಾಗಿ ಆದಾಯ ಗಳಿಸುವ ಯುವಜನರ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಆರ್ಥಿಕ ಅಸಮಾನ ಹಂಚಿಕೆಯನ್ನೂ ಕಾಣುತ್ತಿದ್ದೇವೆ. ಇದು ಜಗತ್ತಿನ ಇತರ ಕಡೆಗಳಲ್ಲೂ ಕಂಡು ಬರುತ್ತಿದೆ. ಇದನ್ನು ಬಗೆಹರಿಸಲು ಸರಕಾರ ಒಂದರಿಂದಲೇ ಸಾಧ್ಯವಿಲ್ಲ. ಖಾಸಗಿ ವಲಯವೂ, ಯುವಜನರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ 45 ವರ್ಷದ ಒಳಗಿನವರನ್ನು ಗುರಿಯಾಗಿಟ್ಟುಕೊಂಡು ಯಂಗ್‌ ಇಂಡಿಯಾ ಫಿಲಾಂತ್ರೊಪಿಕ್‌ ಪ್ಲೆಡ್ಜ್‌ ಅಭಿಯಾನವನ್ನು ಆರಂಭಿಸಲಾಯಿತು. ವೈಐಪಿಪಿಯಲ್ಲಿ ಸೇರಲು ಅರ್ಹತೆ ಏನು? ಯಾರು ಬೇಕಾದರೂ ಸೇರಿಕೊಳ್ಳಬಹುದು. ವಯಸ್ಸು 45ರೊಳಗಿರಬೇಕು ಹಾಗೂ 1000 ಕೋಟಿ ರೂ. ನಿವ್ವಳ ಸಂಪತ್ತು ಹೊಂದಿರಬೇಕು. ಅವರ ಸಂಪತ್ತಿನಲ್ಲಿ ಶೇ.25 ಭಾಗವನ್ನು ಕೊಡಬೇಕು. ಒಂದೇ ಸಲ ನೀಡಬೇಕು ಎಂದೇನಿಲ್ಲ. ಮುಂಬರುವ 10 ವರ್ಷಗಳಲ್ಲಿ ಅಥವಾ ಮತ್ತಷ್ಟು ವರ್ಷಗಳಲ್ಲಿ ನೀಡಬಹುದು. ಇದರಿಂದ ಹೆಚ್ಚು ಯಶಸ್ವಿ ಯುವ ಉದ್ಯಮಿಗಳನ್ನು ಈ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಉಡಾನ್‌ನ ಸುಜಿತ್‌ ಕುಮಾರ್‌, ರಿಯಾಲ್ಟಿ ಉದ್ಯಮಿ ರವಿ ಪೈ, ನಾನು ಮತ್ತು ನನ್ನ ಸೋದರ ವಾಗ್ದಾನ ಮಾಡಿದ್ದಾರೆ. ಇನ್ನೊಂದು ತಿಂಗಳಿನಲ್ಲಿ 10 ಜನ ಸೇರುವ ನಿರೀಕ್ಷೆ ಇದೆ. ಯಾವ ಕ್ಷೇತ್ರಗಳಲ್ಲಿ ಸಮಾಜ ಸೇವೆಗೆ ನೆರವು ? ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆಗೆ ವೈಐಪಿಪಿ ಸಹಕರಿಸಲಿದೆ. ಕರ್ನಾಟಕದ ಎರಡು ಜಿಲ್ಲೆಗಳಲ್ಲಿಸರಕಾರಿ ಶಾಲೆಗಳ ಅಭಿವೃದ್ಧಿಗೆ ನೆರವು ನೀಡಲಿದೆ. ಅಖಿಲ ಭಾರತ ಮಟ್ಟದಲ್ಲಿಅಭಿಯಾನ ನಡೆಯಲಿದೆ. ಇದು ಚಾರಿಟಿ ಅಲ್ಲ. ಎಲ್ಲರನ್ನೂ ಸೇರಿಸಿ ಯಾವ ಚಾರಿಟಿ, ಯಾವ ಯೋಜನೆಗೆ ಹಣ ವಿನಿಯೋಗಿಸಬಹುದು ಎಂದು ನಿರ್ಧರಿಸಲಾಗುತ್ತದೆ. ಇಲ್ಲಿ ನಿರ್ದಿಷ್ಟ ದೇಣಿಗೆ ನೀಡುವ ವಾಗ್ದಾನ ಪಡೆದು ಯುವಜನತೆ ಸೇರಲಿದ್ದಾರೆ. ಎರಡು ಜಿಲ್ಲೆಗಳಲ್ಲಿ 200 ಶಾಲೆಗಳನ್ನು ಮೊದಲ ಹಂತದಲ್ಲಿ ಸುಧಾರಿಸಲು ನೆರವು ನೀಡಲಾಗುವುದು. ಸ್ಪೂರ್ತಿ ಏನು? ನಮ್ಮ ಸಮಾಜದಲ್ಲಿ ಆರ್ಥಿಕ ಸಮಾನತೆಯನ್ನು ನಿವಾರಿಸಲು ಉಳ್ಳವರು ಸಹಕರಿಸಬೇಕು ಎಂಬುದೇ ನಮ್ಮ ಪ್ರೇರಣೆ. ಸರಕಾರ ಒಂದಕ್ಕೇ ಇದು ಅಸಾಧ್ಯ. 20 ರಿಂದ 30 ಮಂದಿ ಇದಕ್ಕೆ ಸೇರಿದರೆ ಇದು ದೊಡ್ದ ಯೋಜನೆಯಾಗುತ್ತದೆ.