ಮಹಾರಾಷ್ಟ್ರದ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಅಗ್ನಿ ಆಕಸ್ಮಿಕ, 10 ಸಾವು

ಅಹಮದ್‌ನಗರದ ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಶನಿವಾರ ಮುಂಜಾನೆ 11 ಗಂಟೆ ಸುಮಾರಿಗೆ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 10 ಜನ ರೋಗಿಗಳು ಸಾವನ್ನಪ್ಪಿದ್ದು, ಇನ್ನೂ ಹಲವಾರು ಜನರು ತೀವ್ರ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಅಗ್ನಿ ಆಕಸ್ಮಿಕ, 10 ಸಾವು
Linkup
ಅಹಮದ್‌ನಗರ (): ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಶನಿವಾರ ಮುಂಜಾನೆ 11 ಗಂಟೆ ಸುಮಾರಿಗೆ ಸಂಭವಿಸಿದ್ದು 10 ಜನ ರೋಗಿಗಳು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ತೀವ್ರ ಗಾಯಗೊಂಡಿದ್ದಾರೆ. ಬೆಂಕಿ ಕಾಣಿಸಿಕೊಂಡ ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ 17 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಭೋನ್ಸೆ ಹೇಳಿದ್ದಾರೆ. ಆಸ್ಪತ್ರೆಯ ಫೈರ್‌ ಆಡಿಟ್‌ ಕೂಡ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಅಗ್ನಿ ಆಕಸ್ಮಿಕಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ ಅಗ್ನಿ ಶಾಮಕ ದಳದ ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್‌ ಸರ್ಕ್ಯೂಟ್‌ನಿಂದ ವಾರ್ಡ್‌ಗೆ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದು ಬಂದಿರುವುದಾಗಿ ಭೋನ್ಸೆ ಹೇಳಿದ್ದಾರೆ. ಆಸ್ಪತ್ರೆಯ ಕೆಳ ಮಹಡಿಯಿಂದ ಹೊಗೆ ಮೇಲೇಳುತ್ತಿರುವ ಮತ್ತು ಜನರು ಆತಂಕದಲ್ಲಿ ಅತ್ತಿಂದಿತ್ತ ಓಡಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಬೆಂಕಿ ಆರಿದ ಬಳಿಕ ಜನರು ಮತ್ತು ವೈದ್ಯರು ಆಸ್ಪತ್ರೆ ಪ್ರವೇಶಿಸುತ್ತಿರುವ, ಗಾಯಾಳುಗಳನ್ನು ಉಳಿಸಲು ವೈದ್ಯರು ಹತಾಶರಾಗಿ ಯತ್ನಿಸುತ್ತಿರುವ ವಿಡಿಯೋಗಳು ಕೂಡ ಹೊರ ಬಂದಿವೆ. ಅಗ್ನಿ ಆಕಸ್ಮಿಕದ ಬಗ್ಗೆ ತನಿಖೆ ನಡೆಯಲಿದೆ ಎಂದು ಸರಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌, ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ತುರ್ತಾಗಿ ಈ ಆಸ್ಪತ್ರೆಯ ಐಸಿಯು ಘಟಕವನ್ನು ಸಿದ್ದಪಡಿಸಲಾಗಿತ್ತು. ಅಗ್ನಿ ಆಕಸ್ಮಿಕ ನಡೆದಿರುವುದು ಗಂಭೀರ ಘಟನೆ ಎಂದು ಹೇಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಎಲ್ಲಾ ಆಸ್ಪತ್ರೆಗಳಿಗೆ ಫೈರ್‌ ಆಡಿಟ್‌ ನಡೆಸಲು ಸೂಚಿಸಲಾಗಿದೆ. ಅಹಮದ್‌ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ದುರಂತದ ಬಗ್ಗೆ ವಿವರವಾದ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಸಾವನಪ್ಪಿರುವ ಕುಟುಂಬದವರಿಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸಂತಾಪ ಸೂಚಿಸಿದ್ದಾರೆ ಎಂದು ನವಾಬ್‌ ಮಲಿಕ್‌ ಹೇಳಿದ್ದು, ಸಾವಿಗೀಡಾದವರು ಮತ್ತು ಗಾಯಾಳುಗಳ ಕುಟುಂಬಸ್ಥರಿಗೆ ಸಾಧ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಘಟನೆಗೆ ಕಾರಣವಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. "ಅಹ್ಮದ್‌ನಗರದಿಂದ ಅತ್ಯಂತ ಆಘಾತಕಾರಿ ಸುದ್ದಿ ಬಂದಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು... ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆ ಬಗ್ಗೆ ವಿವರವಾದ ತನಿಖೆ ನಡೆಸಬೇಕು ಮತ್ತು ಇದಕ್ಕೆ ಕಾರಣರಾದ ಜನರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು," ಎಂದು ಅವರು ಟ್ಟೀಟ್‌ನಲ್ಲಿ ಒತ್ತಾಯಿಸಿದ್ದಾರೆ. ಇನ್ನು ಅಹಮದ್‌ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎನ್‌ಸಿಪಿ ಶಾಸಕ ಸಂಗ್ರಾಮ್‌ ಜಗ್‌ತಪ್‌, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.