ಮುಂಬಯಿ ಗಗನಚುಂಬಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ, 7 ಸಾವು, 15 ಜನರಿಗೆ ಗಾಯ

ಮುಂಬಯಿಯ ತಾರ್ದೆವೋ ಪ್ರದೇಶದ ಕಮ್ಲಾ ಬಿಲ್ಡಿಂಗ್‌ನಲ್ಲಿ ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. 18ನೇ ಮಹಡಿಯಲ್ಲಿ ಕಾಣಿಸಿಕೊಂಡ ಅಗ್ನಿಯ ಕೆನ್ನಾಲಿಗೆ ತಕ್ಷಣವೇ ಹಬ್ಬಿ 7 ಜನರನ್ನು ಬಲಿ ಪಡೆದಿದೆ.

ಮುಂಬಯಿ ಗಗನಚುಂಬಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ, 7 ಸಾವು, 15 ಜನರಿಗೆ ಗಾಯ
Linkup
ಮುಂಬಯಿ: ಇಲ್ಲಿನ 20 ಮಹಡಿಗಳಿರುವ ವಸತಿ ಸಮುಚ್ಛಯವೊಂದರಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ. ಮುಂಬಯಿಯ ತಾರ್ದೆವೋ ಪ್ರದೇಶದ ಗೊವಾಲಿಯಾ ಟ್ಯಾಂಕ್‌ನಲ್ಲಿರುವ ಗಾಂಧಿ ಆಸ್ಪತ್ರೆ ಮುಂಭಾಗದ ಕಮ್ಲಾ ಬಿಲ್ಡಿಂಗ್‌ನಲ್ಲಿ ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. 18ನೇ ಮಹಡಿಯಲ್ಲಿ ಕಾಣಿಸಿಕೊಂಡ ಅಗ್ನಿಯ ಕೆನ್ನಾಲಿಗೆ ತಕ್ಷಣವೇ ಹಬ್ಬಿ 7 ಜನರನ್ನು ಬಲಿ ಪಡೆದಿದೆ. ದೃಶ್ಯಗಳಲ್ಲಿ ಕಡುಗಪ್ಪು ಹೊಗೆ ಕಟ್ಟಡದಿಂದ ಹೊರಬರುತ್ತಿರುವುದು ಕಾಣಿಸಿದೆ. "ಘಟನೆಯಲ್ಲಿ ಗಾಯಗೊಂಡಿರುವ 6 ಜನ ವೃದ್ಧರಿಗೆ ಆಮ್ಲಜನಕದ ಅಗತ್ಯವಿದೆ," ಎಂದು ಮೇಯರ್‌ ಕಿಶೋರಿ ಪೆಡ್ನೇಕರ್‌ ಹೇಳಿದ್ದಾರೆ. "ಸದ್ಯಕ್ಕೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಅವರು ಹೇಳಿದ್ದು, ಭಾರಿ ಹೊಗೆ ಆವರಿಸಿದೆ," ಎಂದು ವಿವರಿಸಿದ್ದಾರೆ. ಘಟನೆ ಸಂಬಂಧ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಅಗ್ನಿ ಶಾಮಕ ದಳದವರು ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದಿದ್ದರು. ಒಟ್ಟು 13 ಅಗ್ನಿ ಶಾಮಕ ವಾಹನಗಳು ಮತ್ತು 7 ವಾಟರ್‌ ಜೆಟ್ಟಿಗಳು ಬೆಂಕಿ ನಂದಿಸುವಲ್ಲಿ ನಿರತವಾಗಿದ್ದವು. ವಿಪತ್ತಿನ ಮಾಪನದಲ್ಲಿ ಇದನ್ನು ಲೆವೆಲ್‌ - 3 ಎನ್ನಲಾಗಿದೆ. ಆರಂಭದಲ್ಲೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ಹೇಳಿದರು. ಇವರಲ್ಲಿ ಐವರು ಗಂಭೀರ ಗಾಯಗಳ ಕಾರಣಕ್ಕೆ ನಾಯರ್‌ ಹಾಸ್ಪಿಟಲ್‌ನಲ್ಲಿ ಸಾವನ್ನಪ್ಪಿದರೆ, ಒಬ್ಬರು ಕಸ್ತೂರ್ಬಾ ಹಾಸ್ಪಿಟಲ್‌ನಲ್ಲಿ ಮತ್ತು ಇನ್ನೊಬ್ಬರು ಭಾಟಿಯಾ ಹಾಸ್ಪಿಟಲ್‌ನಲ್ಲಿ ಪ್ರಾಣ ಕಳೆದುಕೊಂಡರು. 'ಎಂದಿನಂತೆ ಘಟನೆಗೆ ಯಾವುದೋ ಒಂದು ಕಾರಣವನ್ನು ನೀಡಲಾಗುತ್ತದೆ ಮತ್ತು ಜೀವನವು ಎಂದಿನಂತೆ ಮುಂದುವರಿಯುತ್ತದೆ. ನಗರ ಉಳಿಯಬೇಕಾದರೆ ಪ್ರಬಲ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಓರ್ವ ಮುಂಬಯಿಗಳಾಗಿ ಉತ್ತರದಾಯಿ ಇಲ್ಲದ ನೋವು ಕಾಡುತ್ತಿದೆ' ಎಂದು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಟ್ಟೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.