ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಕೊರೊನಾ ನೆಗೆಟಿವ್‌ ರಿಪೋರ್ಟ್‌/2 ಡೋಸ್‌ ಲಸಿಕೆ ಕಡ್ಡಾಯ

ಮತ ಎಣಿಕೆ ವೇಳೆ ಕೊರೊನಾ ಹರಡುವಿಕೆ ತಡೆಗಟ್ಟುವ ಸಂಬಂಧ ಹೊಸ ಮಾರ್ಗಸೂಚಿಯನ್ನು ಚುನಾವಣಾ ಆಯೋಗ ಬುಧವಾರ ಬಿಡುಗಡೆ ಮಾಡಿದ್ದು, ಮೇ 2ರಂದು ಮತ ಎಣಿಕೆ ಕೇಂದ್ರದ ಹೊರಗೆ ಜನ ಸೇರುವುದನ್ನು ನಿಷೇಧಿಸಿದೆ.

ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಕೊರೊನಾ ನೆಗೆಟಿವ್‌ ರಿಪೋರ್ಟ್‌/2 ಡೋಸ್‌ ಲಸಿಕೆ ಕಡ್ಡಾಯ
Linkup
ಹೊಸದಿಲ್ಲಿ: ಭಾನುವಾರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕವೂ ಸೇರಿ ದೇಶದ ಹಲವೆಡೆ ನಡೆದ ಉಪಚುನಾವಣೆಗಳ ನಡೆಯಲಿದೆ. ಈ ವೇಳೆ ಮತ ಎಣಿಕೆ ಕೇಂದ್ರ ಪ್ರವೇಶಿಸಿಲು ಅಭ್ಯರ್ಥಿಗಳು ಕೊರೊನಾ ನೆಗೆಟಿವ್‌ ವರದಿ ಅಥವಾ ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣ ಪತ್ರ ನೀಡುವುದು ಕಡ್ಡಾಯ ಎಂದು ಬುಧವಾರ ಹೇಳಿದೆ. ಜತೆಗೆ ಈಗಾಗಲೇ ಮತ ಎಣಿಕೆ ನಂತರ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿದೆ. ಮತ ಎಣಿಕೆ ಸಂಬಂಧ ಹೊಸ ಮಾರ್ಗಸೂಚಿಯನ್ನು ಚುನಾವಣಾ ಆಯೋಗ ಬುಧವಾರ ಬಿಡುಗಡೆ ಮಾಡಿದ್ದು, ಮತ ಎಣಿಕೆ ಕೇಂದ್ರದ ಹೊರಗೆ ಮೇ 2ರಂದು (ಭಾನುವಾರ) ಜನ ಸೇರುವುದನ್ನು ನಿಷೇಧಿಸಿದೆ. ಅಭ್ಯರ್ಥಿಗಳು ಮತ್ತು ಅವರ ಏಜಂಟರುಗಳು ಎರಡು ಡೋಸ್‌ ಲಸಿಕೆ ಪಡೆದಿದ್ದಲ್ಲಿ ಅಥವಾ 48 ಗಂಟೆಗಳ ಒಳಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್‌ ವರದಿ ಬಂದಿದ್ದಲ್ಲಿ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಪ್ರವೇಶ ನೀಡಲಾಗುವುದು ಎಂದು ಹೇಳಿದೆ. ಅಭ್ಯರ್ಥಿಗಳು ಮೂರು ದಿನ ಮೊದಲೇ ತಮ್ಮ ಏಜೆಂಟರ ಪಟ್ಟಿಯನ್ನು ನೀಡಬೇಕು ಎಂದೂ ಆಯೋಗ ಹೇಳಿದೆ. ಮಂಗಳವಾರವಷ್ಟೆ ಆಯೋಗ ಚುನಾವಣಾ ಫಲಿತಾಂಶದ ಬಳಿಕ ವಿಜಯೋತ್ಸವ ಆಚರಣೆ ಮಾಡುವಂತಿಲ್ಲ ಎಂದು ಹೇಳಿತ್ತು. ಈಗಾಗಲೇ ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೆರಿಯಲ್ಲಿ ಮತದಾನ ಪೂರ್ಣಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಮತದಾನ ನಾಳೆ ಅಂದರೆ ಏಪ್ರಿಲ್‌ 29ರ ಗುರುವಾರ ನಡೆಯಲಿದೆ. ಇದಾದ ಬಳಿಕ ಭಾನುವಾರ ಮತ ಎಣಿಕೆ ನಡೆಯಲಿದೆ.