ನಿರ್ವಸಿತರೂ ದೇಶಕ್ಕಾಗಿ ದುಡಿಯಬೇಕು, ಸರಕಾರವೇ ಎಲ್ಲವನ್ನೂ ಪೂರೈಸಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್

ಮುಂಬಯಿ ನಗರದಲ್ಲಿನ ನಿರ್ವಸಿತರು, ಭಿಕ್ಷುಕರು ಕೂಡ ದೇಶಕ್ಕಾಗಿ ಕೆಲಸ ಮಾಡಬೇಕು. ಸರಕಾರವೇ ಎಲ್ಲವನ್ನೂ ಉಚಿತವಾಗಿ ಒದಗಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ನಿರ್ವಸಿತರೂ ದೇಶಕ್ಕಾಗಿ ದುಡಿಯಬೇಕು, ಸರಕಾರವೇ ಎಲ್ಲವನ್ನೂ ಪೂರೈಸಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್
Linkup
ಮುಂಬಯಿ: ಸರಕಾರದಿಂದ ಉಚಿತವಾಗಿ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಅವರು ದೇಶಕ್ಕಾಗಿಯೂ ಕೆಲಸ ಮಾಡಬೇಕು ಎಂದು ಶನಿವಾರ ಹೇಳಿದೆ. ಮುಂಬಯಿ ನಗರದಲ್ಲಿರುವ ನಿರಾಶ್ರಿತರು, ಭಿಕ್ಷುಕರು ಮತ್ತು ನಿರ್ಗತಿಕ ಜನರಿಗೆ ಆಹಾರ, ನೀರು ಹಾಗೂ ಶೌಚಾಲಯಗಳನ್ನು ಒದಗಿಸುವಂತೆ ರಾಜ್ಯ ಹಾಗೂ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅದು ವಜಾಗೊಳಿಸಿದೆ. ಮನೆಯಿಲ್ಲದ ನಿರಾಶ್ರಿತರಿಗೆ ದಿನದಲ್ಲಿ ಮೂರು ಬಾರಿ ಪೌಷ್ಟಿಕಾಂಶಯುತ ಬೇಯಿಸಿದ ಊಟ, ಕುಡಿಯುವ ನೀರು ಹಾಗೂ ಮಹಿಳೆಯರು ಮತ್ತು ತರುಣಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸುವಂತೆ ಸರಕಾರ ಹಾಗೂ ಬಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಬ್ರಿಜೇಶ್ ಆರ್ಯ ಎಂಬುವವರು ಮನವಿ ಮಾಡಿದ್ದರು. ಈ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ನ್ಯಾ. ಜಿಎಸ್ ಕುಲಕರ್ಣಿ ಅವರನ್ನು ಒಳಗೊಂಡ ನ್ಯಾಯಪೀಠ, 'ಇದು ಜನರು ಕೆಲಸ ಮಾಡದೆ ಇರುವಂತೆ ನೀಡುವ ಆಹ್ವಾನದಂತೆ ಕಾಣಿಸುತ್ತದೆ' ಎಂದು ವ್ಯಾಖ್ಯಾನಿಸಿತು. 'ನಿರ್ವಸಿತ ಜನರು ಕೂಡ ದೇಶಕ್ಕಾಗಿ ಕೆಲಸ ಮಾಡಬೇಕು. ಎಲ್ಲವನ್ನೂ ಸರಕಾರಗಳೇ ಒದಗಿಸಲು ಸಾಧ್ಯವಿಲ್ಲ. ಈ ಅರ್ಜಿಯು ಸಮಾಜದ ಈ ವರ್ಗದ ಜನಸಂಖ್ಯೆಯನ್ನು ಹೆಚ್ಚಿಸುವಂತಿದೆ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ನಿರ್ವಸಿತ ಜನರು ಎಂದರೆ ಯಾರು, ನಗರ ಹಾಗೂ ರಾಜ್ಯದಲ್ಲಿನ ಅವರ ಜನಸಂಖ್ಯೆ ಎಷ್ಟು, ನಿರಾಶ್ರಿತರಿಗೆ ಸರಕಾರ ನೀಡಬೇಕಿದ್ದ, ಆದರೆ ಒದಗಿಸದ ಸೌಲಭ್ಯಗಳು ಯಾವುವು ಎಂಬ ವಿವರಗಳ ಕೊರತೆ ಅರ್ಜಿಯಲ್ಲಿದೆ ಎಂದು ಹೇಳಿತು. ಮನೆ ಇಲ್ಲದ ಜನರಿಗೆ ಮತ್ತು ಬಡವರಿಗೆ ಆಹಾರ ಪೊಟ್ಟಣಗಳನ್ನು ಹಂಚಲು ಹಾಗೂ ಈ ವರ್ಗದ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಪೂರೈಸಲು ರಾಜ್ಯ ಮತ್ತು ಪಾಲಿಕೆ ಅಧಿಕಾರಿಗಳು ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಜತೆ ಪಾಲುದಾರಿಕೆ ಹೊಂದಿವೆ ಎಂದು ಇದೇ ಸಂದರ್ಭದಲ್ಲಿ ಬಾಂಬೆ ಹೈಕೋರ್ಟ್‌ಗೆ ಸರಕಾರ ಮಾಹಿತಿ ನೀಡಿದೆ.