ದಾಖಲೆ ಪ್ರಮಾಣದ ರಫ್ತು ವಹಿವಾಟು: ಕೋವಿಡ್‌ ಪೂರ್ವ ಮಟ್ಟಕ್ಕೆ ಮರಳಿದ ಆರ್ಥಿಕತೆ!

ದೇಶದ ಆರ್ಥಿಕ ವಹಿವಾಟು ಕೋವಿಡ್‌ ಪೂರ್ವ ಮಟ್ಟಕ್ಕೆ ಮರಳುತ್ತಿದೆ ಎಂದಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಶ್‌ ಗೋಯಲ್‌ ಅವರು, ರಫ್ತು ವಹಿವಾಟು ಸಹ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ದಾಖಲೆ ಪ್ರಮಾಣದ ರಫ್ತು ವಹಿವಾಟು: ಕೋವಿಡ್‌ ಪೂರ್ವ ಮಟ್ಟಕ್ಕೆ ಮರಳಿದ ಆರ್ಥಿಕತೆ!
Linkup
ಹೊಸದಿಲ್ಲಿ: ದೇಶದ ಆರ್ಥಿಕ ವಹಿವಾಟು ಕೋವಿಡ್‌ ಪೂರ್ವ ಮಟ್ಟಕ್ಕೆ ಮರಳುತ್ತಿದೆ ಎಂದಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಶ್‌ ಗೋಯಲ್‌ ಅವರು, ವಹಿವಾಟು ಸಹ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿ 40ನೇ ಭಾರತೀಯ ಅಂತಾರಾಷ್ಟ್ರೀಯ ವ್ಯಾಪಾರ ಮೇಳವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ''ದೇಶವು 2022ರ ಮಾರ್ಚ್ ಅಂತ್ಯದಲ್ಲಿ 400 ಶತಕೋಟಿ ಡಾಲರ್‌ ಸರಕು ರಫ್ತು ದಾಖಲಿಸುವ ನಿರೀಕ್ಷೆ ಇದೆ. ಹಾಗೆಯೇ ಸೇವಾ ವಲಯದ ರಫ್ತು ವಹಿವಾಟು ಸಹ 150 ಶತಕೋಟಿ ಡಾಲರ್‌ ತಲುಪುವ ಸಾಧ್ಯತೆ ಇದೆ. ಇದು ಹಿಂದೆಂದಿಗಿಂತಲೂ ಅತ್ಯಧಿಕ ಪ್ರಮಾಣದ ವಹಿವಾಟು ಎಂದು ದಾಖಲಾಗಲಿದೆ,'' ಎಂದರು. ''ನೇರ ವಿದೇಶಿ ಹೂಡಿಕೆಯಲ್ಲಿಯೂ ಸತತ ಏರಿಕೆ ದಾಖಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ27 ಶತಕೋಟಿ ಡಾಲರ್‌ ಎಫ್‌ಡಿಐ ಹರಿದುಬಂದಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.62ರಷ್ಟು ಹೆಚ್ಚಳವಾಗಿದೆ. ವಿದೇಶಿ ನೇರ ಹೂಡಿಕೆಯು ದೇಶದಲ್ಲಿ ಸತತ ಏಳು ವರ್ಷಗಳಿಂದಲೂ ಏರುಗತಿಯಲ್ಲಿದೆ,'' ಎಂದು ತಿಳಿಸಿದರು. ಅಕ್ಟೋಬರ್‌ನಲ್ಲಿ 1.3 ಲಕ್ಷ ಕೋಟಿ ರೂ. ದಾಖಲೆಯ ಜಿಎಸ್‌ಟಿ ಸಂಗ್ರಹವಾಗಿರುವುದನ್ನು ಪ್ರಸ್ತಾಪಿಸಿದ ಸಚಿವರು, ''ದೇಶದ ಹಿಂದಿನ ಸ್ಥಿತಿಗೆ ಮರಳಿದೆ ಎನ್ನುವುದಕ್ಕೆ ಜಿಎಸ್‌ಟಿ ಸಂಗ್ರಹವೇ ಸಾಕ್ಷಿ. ಭವಿಷ್ಯನಿಧಿ ಸಂಘಟನೆ, ಕಾರ್ಮಿಕರ ವಿಮಾ ಸಂಸ್ಥೆಗಳ ಅಂಕಿ-ಅಂಶಗಳು ಸಹ ಆರ್ಥಿಕ ಚಟುವಟಿಕೆ ಸಹಜ ಸ್ಥಿತಿಗೆ ಮರಳಿರುವುದನ್ನೇ ಹೇಳುತ್ತವೆ. ಎಲ್ಲಾ ವಲಯಗಳಲ್ಲಿಯೂ ಕೋವಿಡ್‌ ಪೂರ್ವದ ಸ್ಥಿತಿಗೆ ತಲುಪಿದ್ದೇವೆ,'' ಎಂದು ಪಿಯೂಶ್‌ ಗೋಯಲ್‌ ಹೇಳಿದರು.