ಜೈಲಿಗೆ ಹೋಗುವುದಕ್ಕಾಗಿಯೇ ಪ್ರಧಾನಿ ಮೋದಿಗೆ ಜೀವ ಬೆದರಿಕೆ ಹಾಕಿದ ಯುವಕನ ಬಂಧನ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಯುವಕನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಜಾಮೀನಿನ ಮೇಲೆ ಹೊರಗಿದ್ದ ಈತ, ಜೈಲಿಗೆ ಹೋಗುವುದಕ್ಕಾಗಿಯೇ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಜೈಲಿಗೆ ಹೋಗುವುದಕ್ಕಾಗಿಯೇ ಪ್ರಧಾನಿ ಮೋದಿಗೆ ಜೀವ ಬೆದರಿಕೆ ಹಾಕಿದ ಯುವಕನ ಬಂಧನ
Linkup
ದಿಲ್ಲಿ: ಪ್ರಧಾನಿ ಅವರಿಗೆ ಒಡ್ಡುವ ದೂರವಾಣಿ ಕರೆ ಮಾಡಿದ ಆರೋಪದಡಿ ದಿಲ್ಲಿಯಲ್ಲಿ 22 ವರ್ಷದ ಯುವಕನನ್ನು ಬಂಧಿಸಲಾಗಿದೆ. ಯುವಕನನ್ನು ಸಲ್ಮಾನ್ ಎಂದು ಗುರುತಿಸಲಾಗಿದ್ದು, ಆತ ಗುರುವಾರ ರಾತ್ರಿ ಪೊಲೀಸರಿಗೆ ಬೆದರಿಕೆ ಕರೆ ಮಾಡಿದ್ದ. ದಿಲ್ಲಿಯ ಖಾಜುರಿ ಖಾಸ್ ಎಂಬಲ್ಲಿ ಸಲ್ಮಾನ್‌ನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯು ಜಾಮೀನಿನ ಮೇಲೆ ಹೊರಬಂದಿದ್ದು, ಜೈಲಿಗೆ ಮರಳಿ ಹೋಗಲು ಬಯಸಿದ್ದ ಎನ್ನಲಾಗಿದೆ. ಪೊಲೀಸರಿಗೆ ಕರೆ ಮಾಡಿದ ಆತ, 'ನಾನು ಪ್ರಧಾನಿ ಮೋದಿ ಅವರನ್ನು ಕೊಲ್ಲಲು ಬಯಸಿದ್ದೇನೆ' ಎಂದು ಹೇಳಿದ್ದಾನೆ. ಈ ಕರೆಯ ಜಾಡು ಪತ್ತೆಹಚ್ಚಿದ ಪೊಲೀಸರು, ಈಶಾನ್ಯ ದಿಲ್ಲಿಯ ಖಾಜುರಿ ಖಾಸ್‌ನಲ್ಲಿ ಸಲ್ಮಾನ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದಾಗ, ತಾನು ಮರಳಿ ಜೈಲಿಗೆ ಹೋಗಲು ಬಯಸಿದ್ದರಿಂದ ಈ ಬೆದರಿಕೆ ಕರೆ ಮಾಡಿದ್ದಾಗಿ ತಿಳಿಸಿದ್ದಾನೆ. ಸಲ್ಮಾನ್ ವಿರುದ್ಧ ಅನೇಕ ಪ್ರಕರಣಗಳಿದ್ದು, ಕೆಲವು ಸಮಯದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿಗೆ ವಾಪಸ್ ಹೋಗಲು ಸುಲಭದ ಮಾರ್ಗವಾಗಿ ಬೆದರಿಕೆ ತಂತ್ರವನ್ನು ಅನುಸರಿಸಿದ್ದ. ಇದು ಪ್ರಧಾನಿಗೆ ಬೆದರಿಕೆ ಹಾಕಿದ ಪ್ರಕರಣವಾಗಿರುವುದರಿಂದ ಗುಪ್ತಚರ ಅಧಿಕಾರಿಗಳು ಕೂಡ ಆತನನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಒಡ್ಡಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ಸಿಎಎ ಹಾಗೂ ಎನ್‌ಆರ್‌ಸಿ ಜಾರಿಯ ವಿರುದ್ಧ ಆತ ಆನ್‌ಲೈನ್ ಸಂದೇಶಗಳನ್ನು ಹಂಚಿಕೊಂಡಿದ್ದ.