ಕುಶಾಲನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ ಪ್ರಕರಣ; 9 ಆರೋಪಿಗಳ ಖುಲಾಸೆ
ಕುಶಾಲನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ ಪ್ರಕರಣ; 9 ಆರೋಪಿಗಳ ಖುಲಾಸೆ
ಸ್ವಾತಂತ್ರ್ಯ ದಿನಾಚರಣೆ ಹಿಂದಿನ ದಿನ ಕುಶಾಲ ನಗರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ಯಾತ್ರೆ ಅಂಗವಾಗಿ ನಡೆದ ಪಂಜಿನ ಮೆರವಣಿಗೆಯಲ್ಲಿ ಆಟೋ ಚಾಲಕರೂ ಆಗಿದ್ದ ಪ್ರವೀಣ್ ಪೂಜಾರಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭ ಮೂವರು ಪ್ರಯಾಣಿಕರು ಆಟೋವನ್ನು ಬಾಡಿಗೆಗೆ ಕರೆದುಕೊಂಡು ಹೋಗಿದ್ದರು. ನಂತರ ಗುಡ್ಡೆ ಹೊಸೂರು ಬಳಿಯ ತಿರುವಿನಲ್ಲಿ ದುಷ್ಕರ್ಮಿಗಳು ಪ್ರವೀಣ್ ಪೂಜಾರಿಯ ಕುತ್ತಿಗೆಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು.
ಮಡಿಕೇರಿ: ತಾಲೂಕು ಗುಡ್ಡೆಹೊಸೂರು ಸಮೀಪ 2016ರಲ್ಲಿ ನಡೆದಿದ್ದ ಆರ್ಎಸ್ಎಸ್ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಜಿಲ್ಲಾಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ತೀರ್ಪು ಪ್ರಕಟವಾದ ನಂತರ ಆರೋಪಿಗಳ ಪರ ವಕೀಲ ಅಬೂಬಕರ್ ಟಿ.ಎಚ್. ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ‘2016 ಆ.14ರಂದು ರಾತ್ರಿ ನಡೆದಿದ್ದ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಆ. 24ರಂದು 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. 61ರಷ್ಟು ಸಾಕ್ಷ್ಯ ಕಲೆ ಹಾಕಿ, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಹಾಕಲಾಗಿತ್ತು. ಈ ಪೈಕಿ 27 ಮಂದಿಯ ವಿಚಾರಣೆ ನಡೆಸಿ, ಆರೋಪಿಗಳ ಮೇಲಿನ ಕೊಲೆ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎನ್ನುವ ಕಾರಣದಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಅಬೂಬಕರ್ ತಿಳಿಸಿದರು. ತೀರ್ಪು ಪ್ರಕಟಣೆ ಸಂದರ್ಭ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪ್ರಕರಣದ ಹಿನ್ನೆಲೆ
ಸ್ವಾತಂತ್ರ್ಯ ದಿನಾಚರಣೆ ಹಿಂದಿನ ದಿನ ಕುಶಾಲ ನಗರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ಯಾತ್ರೆ ಅಂಗವಾಗಿ ನಡೆದ ಪಂಜಿನ ಮೆರವಣಿಗೆಯಲ್ಲಿ ಆಟೋ ಚಾಲಕರೂ ಆಗಿದ್ದ ಪ್ರವೀಣ್ ಪೂಜಾರಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭ ಮೂವರು ಪ್ರಯಾಣಿಕರು ಆಟೋವನ್ನು ಬಾಡಿಗೆಗೆ ಕರೆದುಕೊಂಡು ಹೋಗಿದ್ದರು. ನಂತರ ಗುಡ್ಡೆ ಹೊಸೂರು ಬಳಿಯ ತಿರುವಿನಲ್ಲಿ ದುಷ್ಕರ್ಮಿಗಳು ಪ್ರವೀಣ್ ಪೂಜಾರಿಯ ಕುತ್ತಿಗೆಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಆಟೋ ಚಾಲಕರ ಸಂಘದ ಸದಸ್ಯರು ಹಾಗೂ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಗಮನ ಸೆಳೆದು ಧರಣಿ ನಡೆದಿದ್ದವು.
‘ಸತ್ಯ ಗೆಲ್ಲುತ್ತದೆ ಎನ್ನುವ ಭರವಸೆಯಿತ್ತು. ಈ ತೀರ್ಪಿನಿಂದ ಸಂತೋಷವಾಗಿದೆ. ತೃಪ್ತಿ ಸಿಕ್ಕಿದೆ. ಈ ಮೂಲಕ ಕಳೆದ ಹಲವು ವರ್ಷಗಳಿಂದ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ’ ಎಂದು ಆರೋಪಿಗಳ ಪರ ವಾದಿಸಿದ್ದ ವಕೀಲ ಅಬೂಬಕರ್ ಟಿ.ಎಚ್ ಹೇಳಿದ್ದಾರೆ. ಇತ್ತ ಹಿಂದೂ ಜಾಗರಣ ವೇದಿಕೆಯ ನಿಧಿ ಪ್ರಮುಖ್ ಮಂಜುನಾಥ ಡಿ.ಸಿ ಪ್ರತಿಕ್ರಿಯಿಸಿ, ಹತ್ಯೆಗೀಡಾದ ಪ್ರವೀಣ್ ಪೂಜಾರಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಈ ಹಿನ್ನೆಲೆಯಲ್ಲಿ ಅವರ ಕುಟುಂಬದ ಜತೆ ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.