ಆದಾಯ ತೆರಿಗೆ ದಾಳಿ: ತಮಿಳುನಾಡು ಕಂಪನಿಗಳಿಂದ 250 ಕೋಟಿ ಕಪ್ಪುಹಣ ಜಪ್ತಿ

ತಮಿಳುನಾಡಿನ ವಿವಿಧ ಭಾಗಗಳಲ್ಲಿ ಪ್ರತಿಷ್ಠಿತ ವಾಣಿಜ್ಯ ಸಮೂಹದ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೃಹತ್ ಪ್ರಮಾಣದ ತೆರಿಗೆ ವಂಚನೆಯ ಚಾಲವನ್ನು ಬಯಲಿಗೆಳೆದಿದ್ದಾರೆ. 250 ಕೋಟಿ ರೂ ಮೌಲ್ಯದ ಕಪ್ಪು ಹಣವನ್ನು ಐಟಿ ಇಲಾಖೆ ವಶಪಡಿಸಿಕೊಂಡಿದೆ.

ಆದಾಯ ತೆರಿಗೆ ದಾಳಿ: ತಮಿಳುನಾಡು ಕಂಪನಿಗಳಿಂದ 250 ಕೋಟಿ ಕಪ್ಪುಹಣ ಜಪ್ತಿ
Linkup
ಚೆನ್ನೈ: ರೇಷ್ಮೆ ಸೀರೆ ವ್ಯಾಪಾರ ಮತ್ತು ಚಿಟ್‌ ಫಂಡ್‌ ವ್ಯವಹಾರ ನಡೆಸುತ್ತಿದ್ದ ತಮಿಳುನಾಡಿನ ಎರಡು ಕಂಪನಿಗಳ ಮೇಲೆ ನಡೆಸಿದ ದಾಳಿಯಿಂದ 250 ಕೋಟಿ ರೂ. ಕಪ್ಪುಹಣ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಕಾಂಚಿಪುರಂ, ವೆಲ್ಲೂರು, ಚೆನ್ನೈ ಸೇರಿದಂತೆ 34 ಸ್ಥಳಗಳ ಮೇಲೆ ಅಕ್ಟೋಬರ್‌ 5ರಂದು ನಡೆದಿತ್ತು. "ಚಿಟ್‌ಫಂಡ್‌ ವ್ಯವಹಾರದಲ್ಲಿ ತೊಡಗಿದ್ದ ವಾಣಿಜ್ಯ ಸಮೂಹವೊಂದು ಎಗ್ಗಿಲ್ಲದೇ ತೆರಿಗೆ ವಂಚನೆ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿಈ ಕಂಪನಿ 400 ಕೋಟಿ ರೂ. ವಹಿವಾಟು ನಡೆಸಿದೆ. ಅಷ್ಟೂ ವ್ಯವಹಾರವನ್ನು ಯಾವುದೇ ದಾಖಲೆ ಇಲ್ಲದೇ ಅಕ್ರಮ ದಾರಿಯಲ್ಲಿ ನಡೆಸಲಾಗಿತ್ತು. ಎಲ್ಲವನ್ನೂ ನಗದು ರೂಪದಲ್ಲಿಯೇ ನಡೆಸಿ ತೆರಿಗೆ ವಂಚನೆ ಮಾಡಿದೆ," ಎಂದು ಸಿಬಿಡಿಟಿ ಹೇಳಿದೆ. ಕಮಿಷನ್‌ ಮತ್ತು ಲಾಭಾಂಶದ ಮೂಲಕ ಈ ಕಂಪನಿ ನೂರಾರು ಕೋಟಿ ರೂ. ಕಾಳಧನ ಕಲೆಹಾಕಿದೆ. "ನಗದಿನ ಜತೆಗೆ ಈ ಕಂಪನಿಯಿಂದ ಅನೇಕ ಪ್ರಮಾಣ ಪತ್ರ, ಪೋಸ್ಟ್‌ ಡೇಟೆಡ್‌ ಚೆಕ್‌, ಜಿಪಿಎ ದಾಖಲೆ ಪತ್ರಗಳು, ಅಡಮಾನ ಸಾಲ ಪತ್ರಗಳು, ಚಿಟ್‌ ಚಂದಾದಾರರ ಮಾಹಿತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಖಲೆ ಪತ್ರಗಳಿರದ 1.35 ಕೋಟಿ ರೂ. ನಗದು, 7.5 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ. 150 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ಕಳೆದ ನಾಲ್ಕು ವರ್ಷಗಳಿಂದ ರೇಷ್ಮೆ ಸೀರೆಗಳ ವ್ಯಾಪಾರ ಮಾಡುತ್ತಿದ್ದ ಕಂಪನಿ ಸಮೂಹವೊಂದು ಕೂಡ ಇಂತಹದ್ದೇ ಗೋಲ್‌ಮಾಲ್‌ ನಡೆಸಿ ಸಿಕ್ಕಿ ಬಿದ್ದಿದೆ. ನಕಲಿ ಬಿಲ್‌ಗಳನ್ನು ಹರಿದು ಅಪಾರ ಪ್ರಮಾಣದ ತೆರಿಗೆ ವಂಚನೆ ಮಾಡಿದೆ. ಈ ಕಂಪನಿಯ ನೂರು ಕೋಟಿ ರೂ.ಗಳಿಗಿಂತ ಹೆಚ್ಚಿನ ಅಕ್ರಮ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ದಿಷ್ಟವಾಗಿ ಸಿದ್ಧಗೊಳಿಸಿದ ಸಾಫ್ಟ್‌ವೇರ್ ಅಪ್ಲಿಕೇಷನ್ ಒಂದರ ಮೂಲಕ ಮಾರಾಟದ ಅಂಕಿ ಅಂಶಗಳನ್ನು ತಿದ್ದುತ್ತಿರುವುದು ಪತ್ತೆಯಾಗಿದೆ. ಅಂತಹ ವಂಚನೆಯ ಬಳಿಕ ಸಮೂಹದ ಸದಸ್ಯರು ಲೆಕ್ಕಪತ್ರಗಳಿಲ್ಲದ ನಗದು ಹಣವನ್ನು ನಿರಂತರವಾಗಿ ಭೂಮಿ ಹಾಗೂ ಕಟ್ಟಡಗಳ ಮೇಲೆ ಹೂಡಿಕೆ ಮಾಡಲು ಬಳಸುತ್ತಿದ್ದರು. ಇದಕ್ಕೂ ಯಾವುದೇ ಲೆಕ್ಕಪತ್ರಗಳು ಇರುತ್ತಿರಲಿಲ್ಲ ಎಂದು ಸಿಬಿಡಿಟಿ ತಿಳಿಸಿದೆ.