Sruthi Hariharan: 'ಡಾಲಿ' ಧನಂಜಯ ನಟನೆಯ 'ಹೆಡ್‌ ಬುಷ್‌' ಸಿನಿಮಾಕ್ಕೆ ಶ್ರುತಿ ಹರಿಹರನ್‌ ಎಂಟ್ರಿ!

'ಡಾಲಿ' ಧನಂಜಯ ನಟಿಸುತ್ತಿರುವ 'ಹೆಡ್‌ ಬುಷ್‌' ಸಿನಿಮಾದಲ್ಲಿ ಕಲಾವಿದರ ದಂಡೇ ಇದ್ದು, ಒಂದೊಂದಾಗಿ ಅವರ ಹೆಸರುಗಳು ಹೊರಬರುತ್ತಿವೆ. ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಪಾಯಲ್ ರಜಪೂತ್ ನಂತರ ಈಗ ಶ್ರುತಿ ಹರಿಹರನ್ 'ಹೆಡ್‌ ಬುಷ್‌' ತಂಡ ಸೇರಿಕೊಂಡಿದ್ದಾರೆ.

Sruthi Hariharan: 'ಡಾಲಿ' ಧನಂಜಯ ನಟನೆಯ 'ಹೆಡ್‌ ಬುಷ್‌' ಸಿನಿಮಾಕ್ಕೆ ಶ್ರುತಿ ಹರಿಹರನ್‌ ಎಂಟ್ರಿ!
Linkup
'ಲೂಸಿಯಾ' ಸಿನಿಮಾದಿಂದ ಜನಮನಸೂರೆಗೊಂಡ ನಟಿ . ಆನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು. ಆದರೆ ಈಚೆಗೆ ಅವರು ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರು. ಮದುವೆ, ಮಗಳು ಅಂತ ಫ್ಯಾಮಿಲಿಗೆ ಹೆಚ್ಚು ಸಮಯ ನೀಡಿದ್ದರು. ಆದರೆ, ಇದೀಗ ಶ್ರುತಿ ಪುನಃ ಬಣ್ಣ ಹಚ್ಚೋಕೆ ರೆಡಿಯಾಗಿದ್ದಾರೆ. 'ಡಾಲಿ' ಅವರ ಹೊಸ ಸಿನಿಮಾ 'ಹೆಡ್‌ ಬುಷ್‌'ನಲ್ಲಿ ನಟಿಸಲಿದ್ದಾರೆ. ಚಿತ್ರತಂಡದಿಂದ ಈ ಮಾಹಿತಿ ಅಧಿಕೃತವಾಗಿ ಹೊರಬಿದ್ದಿದೆ. ಹಾಗಾದರೆ, ಯಾವ ಪಾತ್ರ? ಸದ್ಯಕ್ಕೆ ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಬೆಂಗಳೂರಿನ ಮೊದಲ ಅಂಡರ್‌ವರ್ಲ್ಡ್‌ ಡಾನ್ ಆಗಿದ್ದ ಎಂ.ಪಿ. ಜಯರಾಜ್ ಬಯೋಪಿಕ್ ಆಗಿರುವ ಈ ಸಿನಿಮಾದ ಮೇಲೆ ಈಗಾಗಲೇ ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಕೊಂಡಿದೆ. ಇದಕ್ಕೆ ಸ್ಕ್ರಿಪ್ಟ್ ಬರೆಯುತ್ತಿರುವುದು ಅಗ್ನಿ ಶ್ರೀಧರ್ ಅನ್ನೋದು ವಿಶೇಷ. ಹೊಸ ಪ್ರತಿಭೆ ಶೂನ್ಯ ಇದರ ನಿರ್ದೇಶನ ಮಾಡುತ್ತಿದ್ದಾರೆ. ಜಯರಾಜ್ ಪಾತ್ರ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ ಡಾಲಿ ಧನಂಜಯ. ಇದೀಗ ಶ್ರುತಿ ಹರಿಹರನ್ ಅವರ ಸೇರ್ಪಡೆ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈಗಾಗಲೇ ಆರ್‌ಎಕ್ಸ್ 100 ಖ್ಯಾತಿಯ ಪಾಯಲ್‌ ರಜಪೂತ್ ಈ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. 'ಹೆಡ್‌ ಬುಷ್‌' ಸಿನಿಮಾವು ಪಾತ್ರವರ್ಗದಿಂದಲೇ ಸಾಕಷ್ಟು ಗಮನಸೆಳೆಯುತ್ತಿರುವುದು ವಿಶೇಷ. ಈಚೆಗಷ್ಟೇ ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ ಅವರು ಈ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಶ್ರುತಿ ಹರಿಹರನ್ ಎಂಟ್ರಿ ಕೊಟ್ಟಿದ್ದಾರೆ. ಅವರು ಯಾವ ಪಾತ್ರ ನಿಭಾಯಿಸುತ್ತಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಅಂದಹಾಗೆ, 2018ರಲ್ಲಿ ಶ್ರುತಿ ಸಖತ್ ಬ್ಯುಸಿ ಇದ್ದರು. ಆ ವರ್ಷ ಅವರು 6 ಸಿನಿಮಾಗಳೂ ತೆರೆಕಂಡಿದ್ದವು. ಅಲ್ಲದೇ 'ನಾತಿಚರಾಮಿ' ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಅವರಿಗೆ ಲಭಿಸಿತ್ತು. 2019 ಮತ್ತು 2020ರಲ್ಲಿ ಒಂದೊಂದು ಸಿನಿಮಾಗಳು ತೆರೆಕಂಡವು. ಈ ಮಧ್ಯೆ 'ವಧಂ' ಅನ್ನೋ ತಮಿಳು ವೆಬ್‌ ಸಿರೀಸ್‌ನಲ್ಲೂ ನಟಿಸಿದರು. ಇದೀಗ 'ಹೆಡ್ ಬುಷ್‌' ಮೂಲಕ ರೀ-ಎಂಟ್ರಿ ನೀಡಿದ್ದಾರೆ. ಈ ಸಿನಿಮಾಗೆ ಚರಣ್‌ ರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು, ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಧನಂಜಯ ಅವರೇ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ತಮ್ಮ ಸ್ನೇಹಿತರು ಮತ್ತು 'ತ್ರಿವಿಕ್ರಮ' ಸಿನಿಮಾದ ನಿರ್ಮಾಪಕ ಸೋಮಣ್ಣ ಜತೆಗೂಡಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಧನಂಜಯ ಈಗಾಗಲೇ ತಮ್ಮ ನಿರ್ಮಾಣ ಸಂಸ್ಥೆಯಿಂದ 'ಬಡವ ರಾಸ್ಕಲ್‌' ಸಿನಿಮಾಗೆ ಬಂಡವಾಳ ಹೂಡಿದ್ದಾರೆ.