2014ರಲ್ಲಿ 7 ಇದ್ದ ಏಮ್ಸ್‌ಗಳ ಸಂಖ್ಯೆ ಇಂದು 22 ಆಗಿದೆ - ಪ್ರಧಾನಿ ಮೋದಿ

ಆರೋಗ್ಯ ಕ್ಷೇತ್ರದ ಮೇಲೆ ಹೂಡಿಕೆ ಮಾಡುವ ಸಮಾಜಗಳಿಗೆ ಮುಂದಿನ ಭವಿಷ್ಯ ಸೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಭಾರತ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದಿದ್ದಾರೆ.

2014ರಲ್ಲಿ 7 ಇದ್ದ ಏಮ್ಸ್‌ಗಳ ಸಂಖ್ಯೆ ಇಂದು 22 ಆಗಿದೆ - ಪ್ರಧಾನಿ ಮೋದಿ
Linkup
ಚೆನ್ನೈ: ಭವಿಷ್ಯವು ಆರೋಗ್ಯ ಕ್ಷೇತ್ರದ ಮೇಲೆ ಹೂಡಿಕೆ ಮಾಡುವ ಸಮಾಜಗಳಿಗೆ ಸೇರಿದೆ. ಭಾರತ ಸರ್ಕಾರವು ಈ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತಂದಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಬುಧವಾರ ತಮಿಳುನಾಡಿನಲ್ಲಿ 11 ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ತಮಿಳು ಶಾಸ್ತ್ರೀಯ ಭಾಷೆಯ ಕೇಂದ್ರೀಯ ಸಂಸ್ಥೆ (ಸಿಐಸಿಟಿ)ಯ ನೂತನ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಪ್ರಧಾನಿ ಮಾತನಾಡಿದರು. ಮುಂದಿನ ಐದು ವರ್ಷಗಳಲ್ಲಿ ತಮಿಳುನಾಡಿಗೆ ಮೂರು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡಲಾಗುವುದು. ಇದು ರಾಜ್ಯಾದ್ಯಂತ ನಗರ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು ಗಂಭೀರ ಕಾಯಿಲೆಯ ಚಿಕಿತ್ಸಾ ವಿಭಾಗಗಳನ್ನು ಸ್ಥಾಪಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು. ‘ನಾನು ಸದಾ ತಮಿಳು ಭಾಷೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಗೆ ಆಕರ್ಷಿತನಾಗಿದ್ದೇನೆ’ ಎಂದ ಪ್ರಧಾನಿಗಳು, 11 ವೈದ್ಯಕೀಯ ಕಾಲೇಜುಗಳು ಮತ್ತು ಶಾಸ್ತ್ರೀಯ ತಮಿಳು ಭಾಷೆಯ ಕೇಂದ್ರೀಯ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆಯೊಂದಿಗೆ ಸಮಾಜದ ಸ್ವಾಸ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ. ಜತೆಗೆ ನಮ್ಮ ಸಂಸ್ಕೃತಿಯೊಂದಿಗೆ ನಮ್ಮ ಸಂಪರ್ಕವು ಗಟ್ಟಿಯಾಗುತ್ತಿದೆ ಎಂದು ವಿವರಿಸಿದರು. ವೈದ್ಯರ ಕೊರತೆಯು ಬಹುಕಾಲದಿಂದ ಸಮಸ್ಯೆಯಾಗಿಯೇ ಉಳಿದಿದ್ದು, ಪ್ರಸ್ತುತ ಸರ್ಕಾರ ಈ ನಿರ್ಣಾಯಕ ಕಂದಕವನ್ನು ನಿವಾರಿಸಲು ಆದ್ಯತೆ ನೀಡಿದೆ. 2014ರಲ್ಲಿ ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. ಕಳೆದ ಏಳು ವರ್ಷಗಳಲ್ಲಿ ಈ ಸಂಖ್ಯೆ 596ಕ್ಕೆ ಏರಿಕೆಯಾಗಿದೆ. ಅಂದರೆ ಶೇ. 54ರಷ್ಟು ಹೆಚ್ಚಳವಾಗಿದೆ. 2014ರಲ್ಲಿ ದೇಶದಲ್ಲಿ ಸುಮಾರು 82 ಸಾವಿರ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಸೀಟುಗಳಿತ್ತು. ಕಳೆದ ಏಳು ವರ್ಷಗಳಲ್ಲಿ ಈ ಸಂಖ್ಯೆ ಸುಮಾರು 1 ಲಕ್ಷದ 48 ಸಾವಿರ ಸೀಟುಗಳಿಗೆ ಏರಿಕೆಯಾಗಿದೆ. ಇದು ಸುಮಾರು ಶೇ. 80ರಷ್ಟು ಹೆಚ್ಚಳವಾಗಿದೆ. 2014ರಲ್ಲಿ ದೇಶದಲ್ಲಿ ಕೇವಲ ಏಳು ಏಮ್ಸ್‌ಗಳಿದ್ದವು. ಅವುಗಳ ಸಂಖ್ಯೆ ಈಗ 22ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು. ಜೀವಮಾನದಲ್ಲಿ ಒಮ್ಮೆ ಬರುವಂತಹ ಕೋವಿಡ್-19ನಂತಹ ಸಾಂಕ್ರಾಮಿಕ ರೋಗವು ಆರೋಗ್ಯ ಕ್ಷೇತ್ರದ ಮಹತ್ವವನ್ನು ಪುನರುಚ್ಚರಿಸಿದೆ. ಭವಿಷ್ಯವು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವ ಸಮಾಜಗಳಿಗೆ ಸೇರಿದೆ. ಭಾರತ ಸರ್ಕಾರವು ಈ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತಂದಿದೆ. ಬಡವರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸಲು ಆಯುಷ್ಮಾನ್ ಭಾರತ್‌ ಯೋಜನೆ ಜಾರಿಗೆ ತಲಾಗಿದೆ. ಮಂಡಿಚಿಪ್ಪು ಕಸಿ ಮತ್ತು ಸ್ಟೆಂಟ್‌ಗಳ ವೆಚ್ಚವು ಹಿಂದೆ ಇದ್ದದ್ದಕ್ಕಿಂತ ಮೂರನೇ ಒಂದು ಭಾಗಕ್ಕೆ ಇಳಿದಿದೆ. 1 ರೂಪಾಯಿ ವೆಚ್ಚದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಮೂಲಕ ಮಹಿಳೆಯರಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಭಾರತೀಯ ಭಾಷೆಗಳು ಮತ್ತು ಭಾರತೀಯ ಜ್ಞಾನ ವ್ಯವಸ್ಥೆಗಳ ಉತ್ತೇಜನಕ್ಕೆ ಒತ್ತು ನೀಡುವುದರ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ತಮಿಳನ್ನು ಈಗ ಮಾಧ್ಯಮಿಕ ಹಂತ ಅಥವಾ ಪ್ರೌಢಶಾಲಾ ಮಟ್ಟದ ಶಿಕ್ಷಣದಲ್ಲಿ ಶಾಸ್ತ್ರೀಯ ಭಾಷೆಯಾಗಿ ಅಧ್ಯಯನ ಮಾಡಬಹುದು ಎಂದು ಹೇಳಿದರು. “ನಾವು ಶಾಲೆಗಳಲ್ಲಿ ಮಾತೃಭಾಷೆ ಮತ್ತು ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದ್ದೇವೆ. ನಮ್ಮ ಸರ್ಕಾರವು ಎಂಜಿನಿಯರಿಂಗ್‌ನಂತಹ ತಾಂತ್ರಿಕ ಕೋರ್ಸ್‌ಗಳನ್ನು ಭಾರತೀಯ ಭಾಷೆಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲು ಪ್ರಾರಂಭಿಸಿದೆ,” ಎಂದು ಅವರು ತಿಳಿಸಿದರು. 'ಏಕ ಭಾರತ, ಶ್ರೇಷ್ಠ ಭಾರತ' ವಿವಿಧತೆಯಲ್ಲಿ ಏಕತೆಯ ಮನೋಭಾವವನ್ನು ಹೆಚ್ಚಿಸಲು ಮತ್ತು ನಮ್ಮ ಜನರನ್ನು ಪರಸ್ಪರ ಹತ್ತಿರಕ್ಕೆ ತರಲು ಪ್ರಯತ್ನಿಸುತ್ತದೆ ಎಂದ ಪ್ರಧಾನಿ ಮೋದಿ, ಹರಿದ್ವಾರದಲ್ಲಿ ಚಿಕ್ಕ ಮಗುವೊಂದು ತಿರುವಳ್ಳುವರ್ ಪ್ರತಿಮೆಯನ್ನು ನೋಡಿ ಅವರ ಹಿರಿಮೆಯನ್ನು ಕಂಡುಕೊಂಡಾಗ, ಯುವ ಮನಸ್ಸಿನಲ್ಲಿ 'ಏಕ ಭಾರತ, ಶ್ರೇಷ್ಠ ಭಾರತ'ದ ಬೀಜವನ್ನು ಬಿತ್ತಿದಂತಾಗುತ್ತದೆ ಎಂದು ಹೇಳಿದರು. ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ಸುಮಾರು 2,145 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದರೆ ಉಳಿದ ಹಣವನ್ನು ಸರ್ಕಾರ ಭರಿಸಿದೆ. ವಿರುದುನಗರ, ನಾಮಕ್ಕಲ್, ನೀಲಗಿರಿ, ತಿರುಪ್ಪೂರ್, ತಿರುವಳ್ಳೂರು, ನಾಗಪಟ್ಟಣಂ, ದಿಂಡಿಗಲ್, ಕಲ್ಲಕುರಿಚಿ, ಅರಿಯಲೂರ್, ರಾಮನಾಥಪುರಂ ಮತ್ತು ಕೃಷ್ಣಗಿರಿ ಜಿಲ್ಲೆಗಳಲ್ಲಿ ಈ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರುಗಳಾದ ಡಾ. ಮನ್ಸುಖ್ ಮಾಂಡವಿಯಾ, ಡಾ.ಎಲ್. ಮುರುಗನ್ ಮತ್ತು ಡಾ. ಭಾರತಿ ಪವಾರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉಪಸ್ಥಿತರಿದ್ದರು.