![](https://vijaykarnataka.com/photo/84268553/photo-84268553.jpg)
(ತಮಿಳುನಾಡು): ಮಹಿಳೆಯರ ವಿರುದ್ಧ ಅಶ್ಲೀಲ ಹೇಳಿಕೆಗಾಗಿ ವಿವಾದಕ್ಕೆ ಗುರಿಯಾಗಿದ್ದ ಜನಪ್ರಿಯ ಟಿವಿ ನಿರೂಪಕ ಮತ್ತು ಡಿಎಂಕೆ ನಾಯಕ ದಿಂಡಿಗಲ್ ಲಿಯೊನಿ ಅವರನ್ನು, ಪಠ್ಯಪುಸ್ತಕಗಳ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಿದೆ.
ತಮಿಳನಾಡಿನಲ್ಲಿ ಪಠ್ಯ ಪುಸ್ತಕಗಳ ಪ್ರಕಟಣೆ, ಮುದ್ರಣ ಮತ್ತು ವಿತರಣೆ, ಮಾರಾಟದ ಹೊಣೆ ಹೊತ್ತಿರುವ 'ಪಠ್ಯಪುಸ್ತಕ ಮತ್ತು ಶೈಕ್ಷಣಿಕ ಸೇವಾ ಸಂಸ್ಥೆಯ' ಮುಖ್ಯಸ್ಥರನ್ನಾಗಿ ಲಿಯೊನಿ ನೇಮಕಗೊಂಡಿದ್ದಾರೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಡಿಎಂಕೆ ಪರ ಪ್ರಚಾರದ ವೇಳೆ ಲಿಯೊನಿ ಅವರು ಮಹಿಳೆಯರನ್ನು ಹಸುಗಳೊಂದಿಗೆ ನಂಟು ಮಾಡಿದ್ದರು. ಅಲ್ಲದೆ, ಮಹಿಳೆಯರ ಸೊಂಟವನ್ನು 'ಬ್ಯಾರಲ್'ಗೆ ಹೋಲಿಸಿದ್ದರು.
'ಮಹಿಳೆಯರು ಈಗ ವಿದೇಶಿ ತಳಿಯ ಹಸುಗಳ ಹಾಲು ಕುಡಿಯುತ್ತಿದ್ದಾರೆ. ಆದ್ದರಿಂದಲೇ ದೇಹ ತೂಕ ಹೆಚ್ಚಿ ಸ್ಥೂಲಕಾಯಿಗಳಾಗಿದ್ದಾರೆ ಎಂದು ಹೇಳಿದ್ದರು. ಹಿಂದಿನ ಕಾಲದಲ್ಲಿ ಮಹಿಳೆಯರು ದೇಸಿ ಹಸುಗಳ ಹಾಲು ಕುಡಿಯುತ್ತಿದ್ದರು. ಅವರು ಮಕ್ಕಳನ್ನು ಸೊಂಟದಲ್ಲಿ ಎತ್ತಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ, ಈಗಿನ ಬ್ಯಾರಲ್ ರೀತಿ ಇರುವುದರಿಂದ ಮಕ್ಕಳನ್ನು ಹಾಗೆ ಎತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದಿದ್ದರು.
ಈ ಮಧ್ಯೆ, ಲಿಯೋನಿ ನೇಮಕ ವಿವಾದ ಹೆಚ್ಚುತ್ತಿದ್ದಂತೆಯೇ, ಈ ನೇಮಕವನ್ನು ಹಿಂಪಡೆಯುವಂತೆ ಪಿಎಂಕೆ ಯುವ ಪಡೆ ಮುಖ್ಯಸ್ಥ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಮಹಿಳೆಯರ ಸೊಂಟ, ಪೃಷ್ಠದ ಬಗ್ಗೆ ಮಾತನಾಡುವ ವ್ಯಕ್ತಿ ಮಕ್ಕಳ ಪಠ್ಯ ಪುಸ್ತಕದ ಬಗ್ಗೆ ಏನು ಕೆಲಸ ಮಾಡಬಲ್ಲರು? ಪಠ್ಯ ಪುಸ್ತಕ ರಚಿಸುವ ಸಂಸ್ಥೆಯು ಮಕ್ಕಳ ಜ್ಞಾನವನ್ನು ವೃದ್ಧಿಸಬೇಕು. ಇಂತಹ ವ್ಯಕ್ತಿಗಳ ನಾಯಕತ್ವದಲ್ಲಿ ರೂಪುಗೊಳ್ಳುವ ಪಠ್ಯ ಪುಸ್ತಕ ಓದುವ ಮಕ್ಕಳ ಗತಿ ಏನಾಗಬೇಡ?' ಎಂದು ಅವರು ಟ್ವೀಟ್ ಮಾಡಿದ್ದಾರೆ.