ಭಾರತದಿಂದ ಪರಾರಿಯಾದರೇ ಮುಂಬಯಿ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್?

ಅನೇಕ ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಮುಂಬಯಿ ಮಾಜಿ ಪೊಲೀಸ್ ಆಯಕ್ತ ಪರಮ್ ಬೀರ್ ಸಿಂಗ್ ಅವರು ಭಾರತದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಪತ್ತೆಗೆ ವ್ಯಾಪಕ ಶೋಧ ನಡೆಯುತ್ತಿದೆ.

ಭಾರತದಿಂದ ಪರಾರಿಯಾದರೇ ಮುಂಬಯಿ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್?
Linkup
ಮುಂಬಯಿ: ಮಹಾರಾಷ್ಟ್ರದ ವಿವಾದಾತ್ಮಕ ಅಧಿಕಾರಿ ದೇಶದಿಂದ ಪಲಾಯನ ಮಾಡಿದ್ದಾರೆಯೇ ಎಂಬ ಅನುಮಾನ ಅಧಿಕಾರಿಗಳನ್ನು ಕಾಡುತ್ತಿದೆ. ಜಾಮೀನುಸಹಿತ ವಾರಂಟೆ ಅನ್ನು ಪರಮ್ ಬೀರ್ ಸಿಂಗ್ ಅವರಿಗೆ ತಲುಪಿಸಲು ಸಿಐಡಿ ವಿಫಲವಾಗಿದ್ದು, ಅವರ ಅಧಿಕೃತ ವಿಳಾಸದಲ್ಲಿ ಅವರು ಪತ್ತೆಯಾಗಿಲ್ಲ. ಮುಂಬಯಿ ಮಹಾನಗರದ ಮಾಜಿ ಪೊಲೀಸ್ ಆಯುಕ್ತರಾಗಿರುವ ಪರಮ್ ಬೀರ್ ಅವರಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ. ಪರಮ್ ಬೀರ್ ವಿರುದ್ಧ ಜುಲೈನಲ್ಲಿಯೇ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು. ಹೀಗಾಗಿ ಅವರು ದೇಶದಿಂದ ಪರಾರಿಯಾಗಿರುವ ಸಾಧ್ಯತೆ ಕಡಿಮೆ ಎಂದು ಗೃಹ ಇಲಾಖೆ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ಉದ್ಯಮಿಯೊಬ್ಬರಿಂದ ಸುಲಿಗೆ ಮಾಡಿದ ಪ್ರಕರಣದಲ್ಲಿ ಸಿಂಗ್ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು. 'ಸಿಂಗ್ ಅವರು ದೇಶದಿಂದ ಪರಾರಿಯಾಗಿದ್ದಾರೆ ಎಂದು ಕೇಂದ್ರ ಸಂಸ್ಥೆಗಳು ನಮಗೆ ಅನಧಿಕೃತವಾಗಿ ತಿಳಿಸಿವೆ. ಲುಕ್‌ಔಟ್ ನೋಟಿಸ್ ಹೊರಡಿಸಿರುವಾಗ ದೇಶದಿಂದ ಹೊರ ಹೋಗುವುದು ಸಾಧ್ಯವಿಲ್ಲ. ಅವರು ಮೊದಲೇ ಪರಾರಿಯಾಗಿರಬೇಕು ಅಥವಾ ದೇಶ ತೊರೆಯಲು ಅಕ್ರಮ ಮಾರ್ಗ ಅನುಸರಿಸಿರಬೇಕು' ಎಂದು ಶುಕ್ರವಾರ ರಾಜ್ಯ ಗೃಹ ಸಚಿವ ದಿಲೀಪ್ ವಲ್ಸೆ ಪಾಟೀಲ್ ನೇತೃತ್ವದಲ್ಲಿ ನಡೆದ ಗೃಹ ಇಲಾಖೆ ಹಿರಿಯ ಅಧಿಕಾರಿಗಳೊಂದಿಗಿನ ಸಭೆ ಬಳಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಪರಮ್ ಬೀರ್ ಸಿಂಗ್ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಸರ್ಕಾರ ರಚಿಸಿದ ಚಂಡಿವಾಲ್ ತನಿಖಾ ಆಯೋಗದ ಮುಂದೆ ಅವರು ಹಾಜರಾಗಿಲ್ಲ. 30ಕ್ಕೂ ಹೆಚ್ಚು ದಿನಗಳ ಹಿಂದೆ ವೈದ್ಯಕೀಯ ರಜೆ ಮೇಲೆ ಹೋಗುವಾಗ ಅವರು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ. ಅವರ ಮೇಲೆ ಅಮಾನತು ಜಾರಿಗೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಆದರೆ ಕಾನೂನಾತ್ಮಕ ಪರಿಶೀಲನೆಯಲ್ಲಿ ನಿಲ್ಲುವಂತಹ ದೋಷ ರಹಿತ ಪುರಾವೆಯನ್ನು ಒದಗಿಸುವಂತೆ ಪೊಲೀಸ್ ಮಹಾ ನಿರ್ದೇಶಕರು ಹೇಳಿದ್ದರು ಎಂದು ಅವರು ವಿವರಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅಮಾನತು ಆದೇಶ ಜಾರಿಯಾಗುವ ಸಾಧ್ಯತೆ ಇತ್ತು. ಗಂಭೀರ ಪ್ರಕರಣದಲ್ಲಿ ಸಿಲುಕಿರುವ ಪರಮ್ ಬೀರ್ ಸಿಂಗ್ ಅವರು ಪರಾರಿಯಾಗಲು ನೇತೃತ್ವದ ಕೇಂದ್ರ ಸರ್ಕಾರ ಸಹಕಾರ ನೀಡಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ. 'ಪರಮ್ ಬೀರ್ ಸಿಂಗ್ ಅವರು ಕೊನೆಯದಾಗಿ ಅಹ್ಮದಾಬಾದ್‌ನಲ್ಲಿ ಇದ್ದಿದ್ದು ಗೊತ್ತಾಗಿದೆ. ಅದು ಬಿಜೆಪಿ ಆಡಳಿತದ ರಾಜ್ಯ. ಆಡಳಿತ ಪಕ್ಷದ ಕೇಂದ್ರ ಸ್ಥಾನ ಎಂದೇ ಅದನ್ನು ಪರಿಗಣಿಸಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳನ್ನು ವಿರೋಧಪಕ್ಷಗಳು ಹಾಗೂ ಅವರ ಸರ್ಕಾರಗಳಿಗೆ ಕಳಂಕ ತರಲು ಬಳಸುತ್ತಿದೆ' ಎಂದು ಅವರು ಆರೋಪಿಸಿದ್ದಾರೆ. ಸಿಂಗ್ ಅವರನ್ನು ಮಾರ್ಚ್ 17ರಂದು ಮುಂಬಯಿ ಪೊಲೀಸ್ ಆಯುಕ್ತ ಸ್ಥಾನದಿಂದ ಕಿತ್ತುಹಾಕಲಾಗಿತ್ತು. ಅವರನ್ನು ಮಹಾರಾಷ್ಟ್ರ ಗೃಹ ರಕ್ಷಕ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ ವಾಹನ ಪತ್ತೆಯಾದ ಬಳಿಕ ಮಹಾರಾಷ್ಟ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿತ್ತು. ಪ್ರತಿ ತಿಂಗಳೂ 100 ಕೋಟಿ ರೂ ಸಂಗ್ರಹಿಸಿ ತರುವಂತೆ ಆಗಿನ ಗೃಹ ಸಚಿವ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ ಪರಮ್ ಬೀರ್ ಸಿಂಗ್, ಕಾನೂನು ಹೋರಾಟದಲ್ಲಿ ಸೋಲು ಕಂಡಿದ್ದರು.