![](https://vijaykarnataka.com/photo/87766476/photo-87766476.jpg)
ಮುಂಬಯಿ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರನ್ನು ‘ಪರಾರಿ’ ಎಂದು ಘೋಷಿಸಬಹುದು ಎಂದು ಮುಂಬೈ ನ್ಯಾಯಾಲಯ ಬುಧವಾರ ಹೇಳಿದೆ. ನ್ಯಾಯಾಲಯದ ಆದೇಶದ ನಂತರ, ಇದೀಗ ಮುಂಬೈ ಪೊಲೀಸರು ಸಿಂಗ್ ಅವರನ್ನು ವಾಂಟೆಡ್ ಆರೋಪಿಯನ್ನಾಗಿ ಗುರುತಿಸಬಹುದು ಮತ್ತು ಪರಾರಿಯಾಗಿದ್ದಾರೆ ಎಂದು ಘೋಷಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದಾಗಿದೆ.
"ಅವರು (ಪರಮ್ ಬೀರ್ ಸಿಂಗ್) 30 ದಿನಗಳಲ್ಲಿ ಕಾನೂನಿನ ಮುಂದೆ ಬರದಿದ್ದರೆ, ಮುಂಬೈ ಪೊಲೀಸರು ಅವರ ಆಸ್ತಿಗಳನ್ನು ಜಪ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಲಿದ್ದಾರೆ," ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಜಗತಾಪ್ ಹೇಳಿದ್ದಾರೆ.
ಪರಮ್ ಬೀರ್ ಸಿಂಗ್ ಕನಿಷ್ಠ ನಾಲ್ಕು ಸುಲಿಗೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದುಕೊಳ್ಳಲಾಗಿದೆ.
ದಿಗ್ಗಜ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮುಖ್ಯಸ್ಥ ಮುಖೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ವಾಹನ ಪತ್ತೆ ಮತ್ತು ಉದ್ಯಮಿ ಮನ್ಸುಖ್ ಹಿರಣ್ ಹತ್ಯೆ ಪ್ರಕರಣದಲ್ಲಿ ವಜಾಗೊಂಡಿದ್ದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಬಂಧನದ ನಂತರ ಮಾರ್ಚ್‌ನಲ್ಲಿ ಪರಮ್‌ಬೀರ್ ಸಿಂಗ್ ಅವರನ್ನು ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು.
ಪರಮ್‌ಬೀರ್ ಸಿಂಗ್ ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸದಿದ್ದರೂ ಸಹ, ಸಚಿನ್ ವಾಝೆ ವಿರುದ್ಧದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾದ ಸಾಕ್ಷಿಗಳಿಂದ ಹಲವಾರು ದೋಷಾರೋಪಣೆಗಳು ಅವರ ವಿರುದ್ಧ ಕೇಳಿ ಬಂದಿದ್ದವು.
ಪರಮ್‌ಬೀರ್ ಸಿಂಗ್ ಅವರು ಕೊನೆಯ ಬಾರಿಗೆ ಏಪ್ರಿಲ್ 7 ರಂದು ‘ಆಂಟಿಲಿಯಾ (ಮುಕೇಶ್ ಅಂಬಾನಿ ಜಿವಾಸ) ಬಾಂಬ್ ಬೆದರಿಕೆ ಪ್ರಕರಣ’ದಲ್ಲಿ ಹೇಳಿಕೆಯನ್ನು ದಾಖಲಿಸಲು ಮುಂಬೈನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಯಾರ ಕಣ್ಣಿಗೂ ಬಿದ್ದಿಲ್ಲ.
ಅಕ್ಟೋಬರ್ 20 ರಂದು, ಪೊಲೀಸರು ಬಾಂಬೆ ಹೈಕೋರ್ಟ್‌ಗೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಹೀಗಾಗಿ 'ಅವರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿಸುವುದಿಲ್ಲ' ಎಂಬ ಹಿಂದಿನ ಭರವಸೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಇನ್ನು ಗುರುವಾರ ಮುಂಜಾನೆ ಮಾಜಿ ನಗರ ಪೊಲೀಸ್ ಆಯುಕ್ತರ ವಿರುದ್ಧ ದಾಖಲಿಸಲಾಗಿರುವ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳನ್ನು ಮಹಾರಾಷ್ಟ್ರ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ (ಸಿಐಡಿ) ಕಸ್ಟಡಿಗೆ ಒಪ್ಪಿಸಲಾಯಿತು. ಈ ಅಧಿಕಾರಿಗಳ ವಿರುದ್ಧವೂ ಸುಲಿಗೆ ಆರೋಪವಿದೆ.
ಈ ಹಿಂದೆ ಮುಂಬೈ ಅಪರಾಧ ವಿಭಾಗದಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸರನ್ನು ಸಿಐಡಿ ಪೊಲೀಸರು ಸೋಮವಾರ ಬಂಧಿಸಿದ್ದರು.