ನಿಮ್ಮಲ್ಲಿರುವ ಉಳಿಕೆ ಆಮ್ಲಜನಕವನ್ನು ದಿಲ್ಲಿಗೆ ಕೊಡಿ - ಮುಖ್ಯಮಂತ್ರಿಗಳಿಗೆ ಕೇಜ್ರಿವಾಲ್‌ ಪತ್ರ

ಆಮ್ಲಜನಕ ಉಳಿದಿದ್ದರೆ ಅವನ್ನು ದಿಲ್ಲಿಗೆ ಪೂರೈಕೆ ಮಾಡುವಂತೆ ಕೋರಿ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದೇನೆ ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಶನಿವಾರ ಟ್ಟೀಟ್‌ ಮಾಡಿದ್ದಾರೆ.

ನಿಮ್ಮಲ್ಲಿರುವ ಉಳಿಕೆ ಆಮ್ಲಜನಕವನ್ನು ದಿಲ್ಲಿಗೆ ಕೊಡಿ - ಮುಖ್ಯಮಂತ್ರಿಗಳಿಗೆ ಕೇಜ್ರಿವಾಲ್‌ ಪತ್ರ
Linkup
ಹೊಸದಿಲ್ಲಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆಕ್ಸಿಜನ್‌ ಪೂರೈಕೆ ತ್ವರಿತಕ್ಕೆ ನಾನಾ ಕಸರತ್ತುಗಳನ್ನು ಮುಂದುವರಿಸಿದ್ದರೂ ಪ್ರಾಣವಾಯುವಿಗೆ ದಿಲ್ಲಿಯ ಆಸ್ಪತ್ರೆಗಳಲ್ಲಿ ಪರದಾಟ ಮುಂದುವರಿದಿದೆ. ಕೊರೊನಾ ಸೋಂಕಿತರು ಮೃತಪಡುವ ಸಾವಿನ ಸರಣಿಯೂ ಭೀಕರಗೊಂಡಿದೆ. ಈ ಹಿನ್ನೆಲೆಯಲ್ಲಿ ಆಮ್ಲಜನಕ್ಕಾಗಿ ಎಲ್ಲಾ ಮುಖ್ಯಮಂತ್ರಿಗಳಿಗೂ ಸಿಎಂ ಪತ್ರ ಬರೆದಿದ್ದಾರೆ. ಈ ಕುರಿತು ಟ್ಟೀಟ್‌ ಮಾಡಿರುವ ಅವರು, "ತಮ್ಮಲ್ಲಿ ಆಮ್ಲಜನಕ ಉಳಿದಿದ್ದರೆ ಅವನ್ನು ದಿಲ್ಲಿಗೆ ಪೂರೈಕೆ ಮಾಡುವಂತೆ ಕೋರಿ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದೇನೆ. ಕೇಂದ್ರ ಸರಕಾರ ನಮಗೆ ಸಹಾಯ ಮಾಡುತ್ತಿದ್ದರೂ, ಕೊರೊನಾದ ತೀವ್ರತೆ ಎಷ್ಟಿದೆ ಎಂದರೆ ಎಲ್ಲಾ ಲಭ್ಯ ಸಂಪನ್ಮೂಲಗಳೂ ಸಾಲುತ್ತಿಲ್ಲ,” ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ದಿಲ್ಲಿಯಲ್ಲಿ ಮುಂದುವರಿದ ಸಾವಿನ ಸರಣಿ ದಿಲ್ಲಿಯ ಗಂಗಾರಾಮ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಪೂರೈಕೆಯಲ್ಲಿನ ವ್ಯತ್ಯಯದಿಂದ 25 ರೋಗಿಗಳು ಮೃತಪಟ್ಟಿರುವ ಘಟನೆ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯ ಜೈಪುರ ಗೋಲ್ಡನ್‌ ಆಸ್ಪತ್ರೆಯಲ್ಲಿ ಶನಿವಾರ ಇದೇ ರೀತಿ ಆಕ್ಸಿಜನ್‌ ಕೊರತೆ ಎದುರಾಗಿ 25 ಕೊರೊನಾ ಸೋಂಕಿತರು ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ. ಪಂಜಾಬ್‌ನ ಖಾಸಗಿ ಆಸ್ಪತ್ರೆಯಲ್ಲೂ ಇದೇ ರೀತಿಯ ಸಮಸ್ಯೆಯಿಂದ 6 ರೋಗಿಗಳು ಜೀವ ಕಳೆದುಕೊಂಡಿದ್ದಾರೆ. ದಿನೇ ದಿನೆ ದಾಖಲೆಯ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾದಂತೆ, ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ದಿಲ್ಲಿ ಸೇರಿದಂತೆ ಮಹಾನಗರಗಳ ದೊಡ್ಡ ಆಸ್ಪತ್ರೆಗಳೂ ಆಕ್ಸಿಜನ್‌ಗೆ ಪರದಾಡುವ ಪರಿಸ್ಥಿತಿ ಮುಂದುವರಿದಿದೆ. ಆಕ್ಸಿಜನ್‌ ಕೊರತೆ ನಿವಾರಣೆಗೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರವೂ ಉನ್ನತ ಮಟ್ಟದ ಸಭೆ ನಡೆಸಿ, ಸೋಂಕಿತರ ಚಿಕಿತ್ಸೆಗೆ ನೆರವಾಗುವ ದಿಸೆಯಲ್ಲಿ ವೈದ್ಯಕೀಯ ಉಪಕರಣಗಳ ಮೇಲಿನ ಆಮದು ಸುಂಕ ರದ್ದುಗೊಳಿಸುವ ತೀರ್ಮಾನ ಪ್ರಕಟಿಸಿದರು. ಆಕ್ಸಿಜನ್‌ ಸರಬರಾಜು ಮತ್ತು ಕೊರೊನಾ ಲಸಿಕೆ ಆಮದಿಗೂ 3 ತಿಂಗಳ ಕಾಲ ಸುಂಕ ವಿನಾಯಿತಿ ಘೋಷಣೆ ನಿರ್ಧಾರವನ್ನೂ ಸಭೆ ಕೈಗೊಂಡಿದೆ. ‘‘ಇದರಿಂದ ಕೋವಿಡ್‌ ಚಿಕಿತ್ಸೆಗೆ ಬಳಸಲಾಗುತ್ತಿರುವ ವೈದ್ಯಕೀಯ ಸಲಕರಣೆಗಳ ಬೆಲೆ ತಗ್ಗಲಿದೆ. ಆಮ್ಲಜನಕ ಸೇರಿದಂತೆ ಅಗತ್ಯ ಔಷಧಗಳ ಬೆಲೆ ಸ್ಥಿರತೆಯೂ ಸಾಧ್ಯವಾಗಲಿದೆ,’’ ಎಂದು ವೈದ್ಯಕೀಯ ತಜ್ಞರು ಭರವಸೆ ವ್ಯಕ್ತಪಡಿಸಿದ್ದಾರೆ. ಆಕ್ಸಿಜನ್‌ ವಾಲ್ವ್‌ ಬಂದ್‌, ಇಬ್ಬರ ಸಾವು ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಸರಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತರಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಆಕ್ಸಿಜನ್‌ ಪೂರೈಸಲಾಗುತ್ತಿದ್ದ ಕೊಳವೆಯ ವಾಲ್ವ್‌ ಬಂದ್‌ ಮಾಡಿದ್ದರಿಂದ ಪೂರೈಕೆ ಸ್ಥಗಿತಗೊಂಡು ರೋಗಿಗಳು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಸುಖದೇವ್‌ ರಾಠೋಡ್‌ ತಿಳಿಸಿದ್ದಾರೆ.