ನಕಲಿ ಐಡಿ ಕಾರ್ಡ್ ಬಳಸಿ ದಿಲ್ಲಿಯಲ್ಲಿ ಅಡಗಿದ್ದ ಪಾಕಿಸ್ತಾನ ಉಗ್ರನ ಬಂಧನ: ದಾಳಿ ಸಂಚು ವಿಫಲ

ದಿಲ್ಲಿಯಲ್ಲಿ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿದ ವಿಶೇಷ ಪೊಲೀಸ್ ಘಟಕ, ನಕಲಿ ಐಡಿ ಕಾರ್ಡ್ ಬಳಸಿ ವಾಸಿಸುತ್ತಿದ್ದ ಪಾಕಿಸ್ತಾನದ ಉಗ್ರನೊಬ್ಬನನ್ನು ಬಂಧಿಸಿದ್ದು, ಸಂಭಾವ್ಯ ಬೃಹತ್ ಭಯೋತ್ಪಾದನಾ ದಾಳಿಯನ್ನು ತಡೆದಿದೆ.

ನಕಲಿ ಐಡಿ ಕಾರ್ಡ್ ಬಳಸಿ ದಿಲ್ಲಿಯಲ್ಲಿ ಅಡಗಿದ್ದ ಪಾಕಿಸ್ತಾನ ಉಗ್ರನ ಬಂಧನ: ದಾಳಿ ಸಂಚು ವಿಫಲ
Linkup
ಹೊಸದಿಲ್ಲಿ: ಪೊಲೀಸರ ವಿಶೇಷ ಘಟಕವು ಮೂಲದ ಭಯೋತ್ಪಾದಕನೊಬ್ಬನನ್ನು ಮಂಗಳವಾರ ನಗರದಲ್ಲಿ ಬಂಧಿಸಿದೆ. ನವರಾತ್ರಿ ಸಂದರ್ಭದಲ್ಲಿ ರಾಜಧಾನಿಯಲ್ಲಿ ನಡೆಯಬಹುದಾಗಿದ್ದ ಬೃಹತ್ ಭಯೋತ್ಪಾದನಾ ದಾಳಿಯನ್ನು ತಪ್ಪಿಸಲಾಗಿದೆ. ದಿಲ್ಲಿಯ ಲಕ್ಷ್ಮಿ ನಗರದ ರಮೇಶ್ ಪಾರ್ಕ್ ಪ್ರದೇಶದಿಂದ ಪಾಕಿಸ್ತಾನದ ಉಗ್ರ ಮೊಹಮ್ಮದ್ ಅಶ್ರಫ್ ಅಲಿಯಾಸ್ ಅಲಿ ಎಂಬಾತನನ್ನು ಬಂಧಿಸಲಾಗಿದೆ. ಆತ ರಾಜಧಾನಿ ದಿಲ್ಲಿಯ ಶಾಸ್ತ್ರಿ ನಗರದಲ್ಲಿ ಭಾರತೀಯ ಪ್ರಜೆ ಎಂದು ತೋರಿಸುವ ನಕಲಿ ಗುರುತಿನ ಚೀಟಿಯೊಂದಿಗೆ ವಾಸಿಸುತ್ತಿದ್ದ. ಸುಮಾರು 10-15 ವರ್ಷಗಳಿಂದಲೂ ಆತ ಅಲಿ ಎಂಬ ಹೆಸರಿನಲ್ಲಿ ಗುರುತಿಸಿಕೊಂಡು ಭಾರತದಲ್ಲಿ ನೆಲೆಸಿದ್ದ. ಬಂಧಿತನ ಅಡಗುದಾಣದಿಂದ ಒಂದು ಎಕೆ-47 ಅಸಾಲ್ಟ್ ರೈಫಲ್, ಒಂದು ಹೆಚ್ಚುವರಿ ಮ್ಯಾಗಜೀನ್ ಮತ್ತು 60 ರೌಂಡ್ಸ್, ಒಂದು ಹ್ಯಾಂಡ್ ಗ್ರೆನೇಡ್, ಎರಡು ಪಿಸ್ತೂಲುಗಳು ಹಾಗೂ 50 ರೌಂಡ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಮೊಹಮ್ಮದ್ ಅಶ್ರಫ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೂಲದವನಾಗಿದ್ದಾನೆ. ಆತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, ಸ್ಫೋಟಕ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 'ಉಗ್ರನೊಬ್ಬ ಲಕ್ಷ್ಮಿ ನಗರದಲ್ಲಿ ಅಡಗಿಕೊಂಡಿದ್ದು, ಮುಂದಿನ ದಿನಗಳಲ್ಲಿ ಆತ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಯೋಜಿಸುತ್ತಿರಬಹುದು ಎಂದು ಮಾಹಿತಿ ದೊರಕಿತ್ತು. ಈ ಮಾಹಿತಿಗಳ ಆಧಾರದಲ್ಲಿ ದಾಳಿಗಳನ್ನು ನಡೆಸಲಾಗಿತ್ತು. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಅಲಿಯನ್ನು ಬಂಧಿಸಲಾಯಿತು. ಆತನ ಮನೆಯಲ್ಲಿ ಎಕೆ-47 ಮತ್ತು ಇತರೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳು ಸಿಕ್ಕಿವೆ. ಆತ ನಗರದಲ್ಲಿ ಬೃಹತ್ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂಬ ಅನುಮಾನ ಉಂಟಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊಹಮ್ಮದ್ ಅಶ್ರಫ್ ಭಾರತದಲ್ಲಿ ಅಲಿ ಅಹ್ಮದ್ ನೂರಿ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದ. ಆತನ ಬಳಿಯಿಂದ ಪಾಸ್‌ಪೋರ್ಟ್, ಗುರುತಿನ ಚೀಟಿ ಸೇರಿದಂತೆ ಅನೇಕ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 'ಹಬ್ಬದ ಆರಂಭಕ್ಕೂ ಮುನ್ನ ವಿಶೇಷ ಪೊಲೀಸ್ ಘಟಕವು ಉತ್ತಮ ಕಾರ್ಯಾಚರಣೆ ನಡೆಸಿದೆ. ನಮ್ಮ ತಂಡವು ಬೃಹತ್ ಭಯೋತ್ಪಾದನಾ ಸಂಚನ್ನು ವಿಫಲಗೊಳಿಸಿದೆ' ಎಂದು ಪೊಲೀಸ್ ಆಯುಕ್ತ ರಾಕೇಶ್ ಆಸ್ಥಾನಾ ತಿಳಿಸಿದ್ದಾರೆ.