ದೈನಿಕ್‌ ಭಾಸ್ಕರ್‌ ಸಮೂಹದಿಂದ 700 ಕೋಟಿ ರೂ. ತೆರಿಗೆ ಬಾಕಿ: ಐಟಿ ಇಲಾಖೆ

ದೈನಿಕ್ ಭಾಸ್ಕರ್ ಮಾಧ್ಯಮ ಸಮೂಹದ ಮೇಲೆ ಗುರುವಾರ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದ ಆದಾಯ ತೆರಿಗೆ ಇಲಾಖೆಯು, ಈ ಸಮೂಹ 700 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಶನಿವಾರ ತಿಳಿಸಿದೆ.

ದೈನಿಕ್‌ ಭಾಸ್ಕರ್‌ ಸಮೂಹದಿಂದ 700 ಕೋಟಿ ರೂ. ತೆರಿಗೆ ಬಾಕಿ: ಐಟಿ ಇಲಾಖೆ
Linkup
ಹೊಸದಿಲ್ಲಿ: 'ದೈನಿಕ್‌ ಭಾಸ್ಕರ್‌' ಸಮೂಹವು ಕಳೆದ ಆರು ವರ್ಷಗಳಿಂದ 700 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಇಲಾಖೆ ಶನಿವಾರ ತಿಳಿಸಿದೆ. ನಾಲ್ಕು ರಾಜ್ಯಗಳಲ್ಲಿರುವ ಸಂಸ್ಥೆ ಕಚೇರಿಗಳು, ಉತ್ತರ ಪ್ರದೇಶದ ಲಖನೌನಲ್ಲಿರುವ ಸುದ್ದಿವಾಹಿನಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎರಡು ದಿನ ಹಿಂದೆ ದಾಳಿ ನಡೆಸಿದ್ದರು. ಸಂಸ್ಥೆಯು ನಕಲಿ ವೆಚ್ಚಗಳ ಬುಕ್ಕಿಂಗ್‌, ಷೇರುಪೇಟೆ ನಿಯಮಗಳ ಉಲ್ಲಂಘನೆ, ಲಾಭದ ಪ್ರಮಾಣವನ್ನು ಮರೆಮಾಚುವುದು, ಸಿಬ್ಬಂದಿ ಹೆಸರಲ್ಲಿಅನೇಕ ಕಂಪನಿಗಳನ್ನು ರಚಿಸಿ ವಹಿವಾಟು ನಡೆಸುತ್ತಿರುವುದು ಅಧಿಕಾರಿಗಳ ದಾಳಿ ವೇಳೆ ಬಯಲಾಗಿದೆ. ತಮ್ಮನ್ನು ಉದ್ಯೋಗಿ ಎಂದು ನಮೂದಿಸಿಕೊಂಡು ಮತ್ತೊಂದು ಕಂಪನಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಮತ್ತು ತಮ್ಮ ಆಧಾರ್‌ ಕಾರ್ಡ್‌ಗಳು, ಡಿಜಿಟಲ್‌ ಸಹಿಗಳು ದುರ್ಬಳಕೆಯಾಗುತ್ತಿರುವ ಬಗ್ಗೆ ಸಿಬ್ಬಂದಿ ಗಾಬರಿಗೊಂಡಿದ್ದಾರೆ ಎಂದು ಐಟಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೇನಾಮಿ ವಹಿವಾಟು ನಿಗ್ರಹ ಕಾಯಿದೆ ಅಡಿಯಲ್ಲಿಪ್ರಕರಣ ದಾಖಲಿಸುವ ಕುರಿತು ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಸಂಬಂಧವೇ ಇಲ್ಲದ ಉದ್ದಿಮೆಗಳಲ್ಲಿ ಮಾಧ್ಯಮ ಸಂಸ್ಥೆಯು ಸುಮಾರು 2,200 ಕೋಟಿ ರೂ. ಹಣದ ವ್ಯವಹಾರ ನಡೆಸಿರುವುದು ಅನುಮಾನಾಸ್ಪದವಾಗಿದೆ ಎಂದು ಇಲಾಖೆ ಹೇಳಿದೆ. ಮಾಧ್ಯಮ ಸಮೂಹಕ್ಕೆ ಸೇರಿದ ವಿವಿಧ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. ಆರೋಪಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ದಿಲ್ಲಿ ಮತ್ತು ಗುಜರಾತ್‌ಗಳ 35 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಇದಲ್ಲದೆ, ಉತ್ತರ ಪ್ರದೇಶದ ಲಕ್ನೋದಲ್ಲಿರುವ ಟೆಲಿವಿಷನ್ ಚಾನೆಲ್ ಭಾರತ್ ಸಮಾಚಾರ್ ಕಚೇರಿ ಹಾಗೂ ಅದರ ಮಾಲೀಕ, ಮುಖ್ಯ ಸಂಪಾದಕರ ಮನೆಯ ಮೇಲೆ ಕೂಡ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ದೇಹಗಳನ್ನು ಗಂಗಾನದಿಯಲ್ಲಿ ತೇಲಿಬಿಡುತ್ತಿದ್ದ ಘಟನೆಯ ಬಗ್ಗೆ ನಿರಂತರ ವರದಿ ಪ್ರಸಾರ ಮಾಡಿದ್ದಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂದು ವಿರೋಧಪಕ್ಷಗಳು ಆರೋಪಿಸಿವೆ.