ದೇಗುಲ ತೆರೆಯಲು ಆಗ್ರಹ, ಮಹಾರಾಷ್ಟ್ರದಲ್ಲಿ ಸರಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ

ರಾಜ್ಯದಲ್ಲಿ ದೇಗುಲಗಳನ್ನು ತೆರೆಯಲು ಅವಕಾಶ ನೀಡದಿರುವ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ, ಮಹಾರಾಷ್ಟ್ರದ ಹಲವು ನಗರಗಳಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ದೇಗುಲ ತೆರೆಯಲು ಆಗ್ರಹ, ಮಹಾರಾಷ್ಟ್ರದಲ್ಲಿ ಸರಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ
Linkup
ಮುಂಬಯಿ: ರಾಜ್ಯದಲ್ಲಿ ದೇಗುಲಗಳನ್ನು ತೆರೆಯಲು ಅವಕಾಶ ನೀಡದಿರುವ ಸರಕಾರದ ನಿಲುವನ್ನು ಖಂಡಿಸಿ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಪ್ರತಿಪಕ್ಷ ನಾಯಕರು ಹಾಗೂ ಕಾರ್ಯಕರ್ತರು ಸೋಮವಾರ ನಡೆಸಿದರು. ಬಿಜೆಪಿ ಅಧೀನದ ಧಾರ್ಮಿಕ ಸಂಘಟನೆ 'ಆಧ್ಯಾತ್ಮಿಕ್‌ ಅಘಾದಿ' ವತಿಯಿಂದ ಮಹಾರಾಷ್ಟ್ರದ ಪುಣೆ, ಮುಂಬಯಿ, ನಾಸಿಕ್‌, ನಾಗ್ಪುರ, ಪಂಡ್ರಾಪುರ, ಔರಂಗಾಬಾದ್‌ ಹಾಗೂ ಹಲವು ಸ್ಥಳಗಳಲ್ಲಿ ಪ್ರತಿಭಟನೆಗೆ ನಡೆಸಲಾಯಿತು. ಪ್ರತಿಭಟನೆ ವೇಳೆ ಬಹುತೇಕ ಕಡೆಗಳಲ್ಲಿ ದೈಹಿಕ ಅಂತರ ಮಾತ್ರ ಕಾಣೆಯಾಗಿತ್ತು. ಕೆಲವೆಡೆ ಪ್ರತಿಭಟನಾಕಾರರು ದೇಗುಲಗಳಿಗೆ ನುಗ್ಗಲು ಪ್ರಯತ್ನವನ್ನೂ ನಡೆಸಿದರು. ಆದರೆ ಪೊಲೀಸರು ಈ ಪ್ರಯತ್ನವನ್ನು ವಿಫಲಗೊಳಿಸಿದರು. ಪುಣೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್‌ ಪಾಟಿಲ್‌ ಅವರು, ಸರಕಾರ ಮದ್ಯದ ಮತ್ತು ಇತರ ಅಂಗಡಿಗಳಿಗೆ ಅವಕಾಶ ನೀಡಿ ದೇಗುಲಗಳನ್ನು ತೆರೆಯದಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಮದ್ಯದ ಅಂಗಡಿ ಮತ್ತು ಇತರ ಮಳಿಗೆಗಳಿಗೆ ಅನ್ವಯವಾಗದ ಕೋವಿಡ್‌ - 19 3ನೇ ಅಲೆ ಭಯ ದೇಗುಲಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ಮಾತ್ರ ಏಕೆ? ದೇಗುಲಗಳನ್ನು ತೆರೆದರೆ ಮೂರನೇ ಅಲೆ ರೂಪದಲ್ಲಿ ಬರುವುದಾಗಿ ಕೋವಿಡ್‌ ವೈರಸ್‌ ಸರಕಾರಕ್ಕೆ ಏನಾದರೂ ಹೇಳಿದೆಯೇ?" ಎಂದು ಅವರು ಖಾರವಾಗಿ ಪ್ರಶ್ನಿಸಿದರು. ಮೈತ್ರಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಎನ್‌ಸಿಪಿಯನ್ನು ಓಲೈಸಲು ಶಿವಸೇನೆಯು ದೇಗುಲ ತೆರೆಯುವ ನಿರ್ಧಾರದಿಂದ ದೂರ ಉಳಿದಿದೆ ಎಂದು ಅವರು ಆರೋಪಿಸಿದರು. ಸರಕಾರಕ್ಕೆ ದಹಿ ಹಂಡಿ ಮಂಡಳಿಗಳ ಸೆಡ್ಡು? ಆಗಸ್ಟ್‌ 31ರಂದು ನಡೆಯಬೇಕಿದ್ದ ಮಹಾರಾಷ್ಟ್ರದ ಜನಪ್ರಿಯ ಸಂಪ್ರದಾಯ 'ದಹಿ ಹಂಡಿ'ಗೆ ರಾಜ್ಯ ಸರಕಾರ ನಿರ್ಬಂಧ ವಿಧಿಸಿರುವುದು ಕಾರ್ಯಕ್ರಮ ಆಯೋಜಕರನ್ನು ಕೆರಳಿಸಿದೆ. ಮುಂಬಯಿ ಹಾಗೂ ಹಲವು ನಗರಗಳ ಬಹುತೇಕ ಪೊಲೀಸರು ಆಯೋಜಕರಿಗೆ ಪೂರ್ವಭಾವಿಯಾಗಿ ನೋಟಿಸ್‌ಗಳನ್ನು ಜಾರಿ ಮಾಡಿದ್ದು, ಕಾರ್ಯಕ್ರಮ ಆಯೋಜಿಸದಂತೆ ಎಚ್ಚರಿಸಿದ್ದಾರೆ. ಮತ್ತೊಂದೆಡೆ ಸರಕಾರದ ವಿರುದ್ಧ ಎಂಎನ್‌ಎಸ್‌ ( ನವನಿರ್ಮಾಣ ಸೇನೆ) 'ದಹಿ ಹಂಡಿ' ಆಯೋಜಕರಿಗೆ ಬೆಂಬಲ ಸೂಚಿಸಿದ್ದು, ನಿರ್ಬಂಧದ ಹೊರತಾಗಿಯೂ ದಹಿ ಹಂಡಿ ಆಚರಿಸುವುದಾಗಿ ಹೇಳಿದೆ. ಠಾಣೆಯಲ್ಲಿ ಇದಕ್ಕಾಗಿ ಸಿದ್ಧತೆಯೂ ನಡೆದಿದೆ. ಎರಡೂ ಕೊರೊನಾ ವ್ಯಾಕ್ಸಿನ್‌ ಪಡೆದಿರುವವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಆಯೋಜಕ ಮಂಡಳಿಗಳು ಮನವಿ ಮಾಡಿವೆ. ಅದರೆ ಪೊಲೀಸರು ಇದಕ್ಕೆ ಒಪ್ಪಿಗೆ ನೀಡಿಲ್ಲ.