ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಒಲಂಪಿಯನ್ ಭವಾನಿ ದೇವಿ ಇತಿಹಾಸ ನಿರ್ಮಾಣ ಮಾಡಿದ್ದು ದೇಶಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಬೀಜಿಂಗ್: ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಒಲಂಪಿಯನ್ ಭವಾನಿ ದೇವಿ ಇತಿಹಾಸ ನಿರ್ಮಾಣ ಮಾಡಿದ್ದು ದೇಶಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.
ಚೀನಾದ ವುಕ್ಸಿಯಲ್ಲಿ ನಡೆದ ಏಷ್ಯನ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪೆನ್ಸರ್ ಭವಾನಿ ದೇವಿ (Bhavani Devi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಮಿಸಾಕಿ ಎಮುರಾ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿ ಭವಾನಿ ದೇವಿ ಫೆನ್ಸಿಂಗ್‌ನಲ್ಲಿ (ಕತ್ತಿ ವರಸೆ) ಭಾರತಕ್ಕೆ ಮೊದಲ ಕಂಚಿನ ಪದಕ ತಂದುಕೊಟ್ಟಿದ್ದಾರೆ.
ಇದನ್ನೂ ಓದಿ:
ಬಹುಮಾನದ ಹಣದಲ್ಲಿ ಒಡಿಶಾ ರೈಲು ದುರಂತ ಸಂತ್ರಸ್ತರ ನಿಧಿಗೆ 20 ಲಕ್ಷ ರೂ. ದೇಣಿಗೆ ನೀಡಿದ ಭಾರತ ಫುಟ್ಬಾಲ್ ತಂಡ
ವಿಶ್ವದ ನಂಬರ್ ಒನ್ ಆಟಗಾರ್ತಿ ಮಿಸಾಕಿ ಎಮುರಾ ಅವರನ್ನು 15-10 ಅಂಕಗಳಿಂದ ಸೋಲಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದ ಭವಾನಿ ದೇವಿ ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಝೈನಾಬ್ ದೈಬೆಕೋವಾ ವಿರುದ್ಧ ಭವಾನಿ 14-15 ಅಂತರದಿಂದ ಸೋಲನುಭವಿಸಿದರು. ಇದಾಗ್ಯೂ ಮೂರನೇ ಸ್ಥಾನ ಪಡೆಯುವ ಮೂಲಕ ಏಷ್ಯನ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಬರೆದರು.
ಭವಾನಿ ದೇವಿ ಸಾಧನೆ ಶ್ಲಾಘಿಸಿದ ಕೇಂದ್ರ ಸಚಿವ ಠಾಕೂರ್
ಇನ್ನು ಈ ಐತಿಹಾಸಿಕ ಸಾಧನೆಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೊಂಡಾಡಿದ್ದಾರೆ. ವಿಶ್ವದ ನಂಬರ್ 1 ಆಟಗಾರ್ತಿಯನ್ನು ಸೋಲಿಸಿ ಪದಕ ಗೆದ್ದಿರುವುದು ನಿಜಕ್ಕೂ ಶ್ಲಾಘನೀಯ. ಪ್ರತಿಯೊಂದು ಅಂತ್ಯಕ್ಕೂ ಒಂದು ಆರಂಭವಿದೆ. ಟೋಕಿಯೋ 2020 ಒಲಿಂಪಿಕ್ಸ್‌ನಲ್ಲಿ ನಿಮ್ಮ ಅದ್ಭುತ ಸಾಧನೆಗಳು ಮತ್ತು ಆ ದಿನ ನೀವು ತೆಗೆದುಕೊಂಡ ಪ್ರತಿಜ್ಞೆಯು ಭಾರತಕ್ಕಾಗಿ ಫೆನ್ಸಿಂಗ್ ಕ್ರೀಡೆಯಲ್ಲಿ ಕನಸನ್ನು ನನಸಾಗಿಸಲು ಮೆಟ್ಟಿಲುಗಳಾಗಿವೆ.
ಇದನ್ನೂ ಓದಿ:
ಇಂಡೋನೇಷ್ಯಾ ಓಪನ್ ಗೆದ್ದು ಇತಿಹಾಸ ಬರೆದ ಭಾರತದ ಸಾತ್ವಿಕ್-ಚಿರಾಗ್ ಜೋಡಿ!
ನಿಮ್ಮ ಈ ಸಾಧನೆಯು ಸಹ ಕ್ರೀಡಾಪಟುಗಳಿಗೆ ಸ್ಫೂರ್ತಿ ಆಗಲಿದೆ. ಅಲ್ಲದೆ ಈ ಕ್ರೀಡೆಗೂ ಅರ್ಹವಾದ ಮನ್ನಣೆಗೆ ಸಿಗುವಂತೆ ಮಾಡಲಿದೆ. ನಿಮ್ಮ ಪ್ರಯಾಣವು ಭಾರತೀಯ ಫೆನ್ಸಿಂಗ್‌ನಲ್ಲಿ ಹೊಸ ಯುಗಕ್ಕೆ ನಾಂದಿಯಾಡಲಿದೆ. ಈ ಮಹೋನ್ನತ ಸಾಧನೆಗಾಗಿ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು, ನೀವು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಎತ್ತರಕ್ಕೆ ಏರುತ್ತಿರಲಿ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.