ಕ್ರಿಕೆಟ್ ವೃತ್ತಿಬದುಕಿನಲ್ಲಿ 20,000 ರನ್ ಪೂರೈಸಿದ ಮಿಥಾಲಿ ರಾಜ್!
ಭಾರತ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ತಮ್ಮ ವೃತ್ತಿಬದುಕಿನಲ್ಲಿ 20,000 ರನ್ ಪೂರೈಸಿದ್ದಾರೆ. ಆಸ್ಪ್ರೇಲಿಯಾ ವಿರುದ್ಧ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಅವರು ಈ ಮೈಲಿಗಲ್ಲು ತಲುಪಿದರು. ಈ ಮೈಲಿಗಲ್ಲು ತಲುಪಿದ ಭಾರತದ ಮೊದಲ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದಾರೆ.
ಈ ವರ್ಷ ಮಾರ್ಚ್‌ನಲ್ಲಿ ಅವರು ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಮಿಥಾಲಿ 218 ಏಕದಿನ ಪಂದ್ಯಗಳಲ್ಲಿ 7,367 ರನ್ ಗಳಿಸಿದ್ದಾರೆ. 89 ಟಿ20ಯಲ್ಲಿ 2,364 ಹಾಗೂ 11 ಟೆಸ್ಟ್ ಪಂದ್ಯಗಳಲ್ಲಿ 669 ರನ್ ಬಾರಿಸಿದ್ದಾರೆ. ಮಹಿಳಾ ಐಪಿಎಲ್ ಸೇರಿ ದೇಸಿ ಕ್ರಿಕೆಟ್‌ನಲ್ಲಿ ಬಾರಿಸಿದ ರನ್ ಪರಿಗಣಿಸಿದರೆ ಒಟ್ಟು ರನ್ 20,000 ದಾಟಲಿದೆ.
ಇನ್ನು ಮಿಥಾಲಿ ರಾಜ್ ಅದ್ಭುತ ಪ್ರದರ್ಶನಕ್ಕೆ ಬಾಲಿವುಡ್ ನಟಿ ತಾಪ್ಸಿ ಪನ್ನುಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಪ್ಸಿ ಪನ್ನು, ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ 'ಶಬ್ಬಾಸ್ ಮಿಥು' ಚಿತ್ರದಲ್ಲಿ ಮಿಥಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ 9 ವಿಕೆಟ್ ಸೋಲು
ಮೆಕೇ(ಆಸ್ಪ್ರೇಲಿಯಾ): ಭಾರತದ ಮಹಿಳೆಯರ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಸ್ಪ್ರೇಲಿಯಾ ತಂಡ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಆಸ್ಪ್ರೇಲಿಯಾ ತಂಡ ತನ್ನ ಗೆಲುವಿನ ಓಟವನ್ನು 25 ಪಂದ್ಯಗಳಿಗೆ ವಿಸ್ತರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 225ರನ್ ಗಳಿಸಿತು. ನಾಯಕಿ ಮಿಥಾಲಿ ರಾಜ್ (63) ಸತತ 5ನೇ ಅರ್ಧಶತಕ ಬಾರಿಸಿದರು. ಆಸೀಸ್ 41 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅಲೀಸಾ ಹೀಲಿ 77, ರೇಚಲ್ ಹೇಯ್ನ್ಸ್ ಔಟಾಗದೆ 93 ಹಾಗೂ ಮೆಗ್ ಲ್ಯಾನಿಂಗ್ ಔಟಾಗದೆ 53 ರನ್ ಸಿಡಿಸಿದರು.