ಬಿಟ್‌ಕಾಯಿನ್‌ ಇಟಿಎಫ್‌ ಎಂದರೇನು? ತಿಳಿಯಲೇಬೇಕಾದ ಮಾಹಿತಿ

ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಬಿಟ್‌ಕಾಯಿನ್ ಫ್ಯೂಚರ್ಸ್ ಎಕ್ಸ್‌ಚೇಂಜ್-ಟ್ರೇಡಡ್ ಫಂಡ್ (ಇಟಿಎಫ್) ಪ್ರವೇಶಿಸಿದ ಕುಡಲೇ ಬಿಟ್‌ಕಾಯಿನ್‌ ಮೌಲ್ಯ ರಾಕೆಟ್‌ ವೇಗದಲ್ಲಿ ಏರಿಕೆಯಾಗಿದೆ. ಹಾಗಿದ್ದರೆ ಬಿಟ್‌ಕಾಯಿನ್‌ ಇಟಿಎಫ್‌ ಎಂದರೇನು? ಇಲ್ಲಿದೆ ಮಾಹಿತಿ.

ಬಿಟ್‌ಕಾಯಿನ್‌ ಇಟಿಎಫ್‌ ಎಂದರೇನು? ತಿಳಿಯಲೇಬೇಕಾದ ಮಾಹಿತಿ
Linkup
ಹೊಸದಿಲ್ಲಿ: ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಬಿಟ್‌ಕಾಯಿನ್ ಫ್ಯೂಚರ್ಸ್ ಎಕ್ಸ್‌ಚೇಂಜ್-ಟ್ರೇಡಡ್ ಫಂಡ್ (ಇಟಿಎಫ್) ಪ್ರವೇಶಿಸಿದ ಕುಡಲೇ ಮೌಲ್ಯ ರಾಕೆಟ್‌ ವೇಗದಲ್ಲಿ ಏರಿಕೆಯಾಗಿದೆ. ಅಕ್ಟೋಬರ್ 19 ರಂದು ಬಿಟ್‌ಕಾಯಿನ್‌ ಫ್ಯೂಚರ್ಸ್‌ ಆರಂಭವಾಯಿತು. ಇದಾದ ಒಂದೇ ದಿನದಲ್ಲಿ ಬಿಟ್‌ಕಾಯಿನ್‌ ಮೌಲ್ಯದ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ ತಲುಪಿತು. ಅಲ್ಲದೆ, ಬಿಟ್‌ಕಾಯಿನ್‌ ಇಟಿಎಫ್‌ ಆರಂಭ ಆಗಿರುವುದರಿಂದ ಜನರು ನೇರವಾಗಿ ಕ್ರಿಪ್ಟೋ ಕರೆನ್ಸಿಯನ್ನು ಖರೀದಿಸದೆಯೂ, ಬಿಟ್‌ಕಾಯಿನ್‌ ಮೇಲೆ ಹೂಡಿಕೆ ಮಾಡಲು ಅವಕಾಶ ಸಿಕ್ಕಂತಾಗಿದೆ. ಭಾರತೀಯ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿ ಬಿಟ್ ಕಾಯಿನ್ ಮೌಲ್ಯ ಅ.20ರಂದು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟ ( $ 67,139 ಅಂದರೆ, ಸರಿಸುಮಾರು 50,25,433 ರೂಪಾಯಿ) ತಲುಪಿದೆ. ಇದೀಗ ಷೇರು ವಹಿವಾಟಿನಂತೆಯೇ, ಹೂಡಿಕೆದಾರರು ದಿನದ ಮಾರುಕಟ್ಟೆಯ ವ್ಯಾಪಾರ ಸಮಯದಲ್ಲಿ ಯಾವುದೇ ಸಮಯದಲ್ಲಿ ಬಿಟ್ ಕಾಯಿನ್ ಇಟಿಎಫ್ನ ಷೇರುಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದಾಗಿದೆ. ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಬಿಟ್‌ಕಾಯಿನ್ ಫ್ಯೂಚರ್ಸ್ ಇಟಿಎಫ್ ಪ್ರವೇಶ ಪಡೆದಿರುವುದು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಉತ್ಸಾಹಿಗಳಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ. ಅಮೆರಿಕದಲ್ಲಿ ಬಿಟ್‌ಕಾಯಿನ್ ಇಟಿಎಫ್ ಪ್ರಾರಂಭಿಸಿದ ಕೇವಲ ಒಂದು ದಿನದ ನಂತರ ಬಿಟ್‌ಕಾಯಿನ್‌ ಮೌಲ್ಯ ಐತಿಹಾಸಿಕ ದಾಖಲೆ ನಿರ್ಮಿಸಿದ್ದು ಇದಕ್ಕೊಂದು ನಿದರ್ಶನ. ಬೆಲೆ ಹೆಚ್ಚಾದ ಕಾರಣದಿಂದಲೂ ಬಿಟ್‌ ಕಾಯಿನ್‌ ಬೇಡಿಕೆ ಮತ್ತಷ್ಟು ಏರಿಕೆ ಕಂಡಿದೆ. ಬಿಟ್‌ಕಾಯಿನ್‌ ಫ್ಯೂಚರ್‌ ಇಟಿಎಫ್‌ ಎಂದರೇನು? ಇಟಿಎಫ್‌ ಎಂದರೆ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌. ಇದು ಸ್ಟಾಕ್ ಎಕ್ಸ್‌ಚೇಂಜ್‌ ರೀತಿಯಲ್ಲೇ ವ್ಯವಹರಿಸುತ್ತದೆ. ದೃಢೀಕರಿಸಿದ ಸ್ಟಾಕ್ ಎಕ್ಸ್‌ಚೇಂಜ್‌ನ ನೋಂದಾಯಿತ ಬ್ರೋಕರ್ ಮೂಲಕ ಸಾಮಾನ್ಯವಾಗಿ ಇಟಿಎಫ್‌ನ ಯೂನಿಟ್‌ಗಳನ್ನು ಖರೀದಿ ಮತ್ತು ಮಾರಾಟ ಮಾಡಲಾಗುತ್ತದೆ. ಇಟಿಎಫ್‌ ಯೂನಿಟ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್ ಮಾಡಲಾಗಿರುತ್ತದೆ ಮತ್ತು ಮಾರ್ಕೆಟ್‌ನ ಚಲನವಲನಗಳಿಗೆ ಅನುಗುಣವಾಗಿ ಎನ್‌ಎವಿ ಬದಲಾಗುತ್ತದೆ. ಇಟಿಎಫ್‌ ಯೂನಿಟ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಾತ್ರ ಲಿಸ್ಟ್ ಮಾಡಿರುವುದರಿಂದ, ಸಾಮಾನ್ಯ ಈಕ್ವಿಟಿ ಫಂಡ್‌ ರೀತಿ ಅದನ್ನು ಖರೀದಿ ಮಾಡಲು ಸಾಧ್ಯ ಇರುವುದಿಲ್ಲ. ಎಕ್ಸ್‌ಚೇಂಜ್‌ ಮೂಲಕ ಖರೀದಿ ಮಾಡಲು ಯಾವುದೇ ಮಿತಿ ಇರುವುದಿಲ್ಲ. ಹೂಡಿಕೆದಾರರು ತಮಗೆ ಇಷ್ಟ ಬಂದಷ್ಟು ಯೂನಿಟ್‌ಗಳನ್ನು ಖರೀದಿ ಮಾಡಬಹುದು. ಸರಳವಾಗಿ ಹೇಳುವುದಾದರೆ, ಸಿಎನ್ಎಕ್ಸ್‌ ನಿಫ್ಟಿ ಅಥವಾ ಬಿಎಸ್‌ಇ ಸೆನ್ಸೆಕ್ಸ್‌ ಇತ್ಯಾದಿಯಂತಹ ಇಂಡೆಕ್ಸ್‌ಗಳನ್ನು ಟ್ರ್ಯಾಕ್‌ ಮಾಡುವ ಫಂಡ್‌ಗಳೇ ಈ ಇಟಿಎಫ್‌ಗಳು. ಇಟಿಎಫ್‌ನ ಒಂದು ಷೇರು ಅಥವಾ ಯೂನಿಟ್‌ ಅನ್ನು ಖರೀದಿ ಮಾಡಿದಾಗ, ತನ್ನ ಮೂಲ ಸೂಚ್ಯಂಕದ ಗಳಿಕೆ ಮತ್ತು ರಿಟರ್ನ್‌ ಅನ್ನು ಟ್ರ್ಯಾಕ್ ಮಾಡುತ್ತಿರುವ ಪೋರ್ಟ್‌ಫೋಲಿಯೋದ ಷೇರು ಅಥವಾ ಯೂನಿಟ್‌ಗಳನ್ನು ನೀವು ಖರೀದಿ ಮಾಡಿರುತ್ತೀರಿ. ಇಟಿಎಫ್‌ಗಳು ಮತ್ತು ಇತರ ಇಂಡೆಕ್ಸ್‌ ಫಂಡ್‌ಗಳ ವಿಧದಲ್ಲಿನ ಮುಖ್ಯ ವ್ಯತ್ಯಾಸವೇನೆಂದರೆ, ಇಟಿಎಫ್‌ಗಳು ತಮ್ಮ ಮೂಲ ಇಂಡೆಕ್ಸ್‌ಗಿಂತ ಹೆಚ್ಚು ಕಾರ್ಯಕ್ಷಮತೆ ತೋರಿಸುವುದಿಲ್ಲ. ಆದರೆ ಇಂಡೆಕ್ಸ್‌ನ ಕಾರ್ಯಕ್ಷಮತೆಯನ್ನೇ ಇವು ಪ್ರತಿಫಲಿಸುತ್ತಿರುತ್ತವೆ. ಮಾರ್ಕೆಟ್‌ಗಿಂತ ಅವು ಮುಂದೆ ಹೋಗುವುದಿಲ್ಲ. ಅವು ಮಾರ್ಕೆಟ್‌ ಅನ್ನೇ ಅನುಸರಿಸುತ್ತವೆ. ಅಂದರೆ, ನೀವು ಬಿಟ್‌ಕಾಯಿನ್‌ಗಳನ್ನು ನೇರವಾಗಿ ಖರೀದಿಸದೆಯೇ 'ಬಿಟ್‌ಕಾಯಿನ್‌ ಇಟಿಎಫ್‌'ನಲ್ಲಿ ಹೂಡಿಕೆ ಮಾಡಿ ಅದರಿಂದ ಲಾಭ ಪಡೆಯಬಹುದು. ಹೀಗಾಗಿಯೇ ಇಟಿಎಫ್‌ಗಳನ್ನು ಪ್ಯಾಸಿವ್ (ಪರೋಕ್ಷ) ಹೂಡಿಕೆ ವಿಧಾನಗಳು ಎನ್ನಲಾಗಿದೆ. ಇವು ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತವೆ ಮತ್ತು ಷೇರುಗಳಂತೆಯೇ ಎಕ್ಸ್‌ಚೇಂಜ್‌ಗಳಲ್ಲಿ ಟ್ರೇಡ್ ಮಾಡುತ್ತವೆ. ಆದರೆ, ಬ್ರೋಕರ್ ಮೂಲಕ ಎಕ್ಸ್‌ಚೇಂಜ್‌ನಿಂದಲೇ ಇಟಿಎಫ್‌ಗಳನ್ನು ಖರೀದಿ ಮತ್ತು ಮಾರಾಟ ಮಾಡಬೇಕು. ಇಟಿಎಫ್‌ಗಳನ್ನು ಟ್ರೇಡ್ ಮಾಡಲು ನೀವು ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು ಮತ್ತು ಪ್ರತಿ ವಹಿವಾಟಿಗೂ ಬ್ರೋಕರ್‌ಗೆ ಕಮಿಷನ್‌ ನೀಡಬೇಕಾಗುತ್ತದೆ. ನೈಜ ಸಮಯದ ಟ್ರೆಡಿಂಗ್‌ನ ಲಾಭ ಮಾಡಿಕೊಳ್ಳಲು ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ಕಾಲ ಸರಿದಂತೆ ಕಮಿಷನ್ ವೆಚ್ಚವು ನಿಮ್ಮ ರಿಟರ್ನ್ಸ್ ಅನ್ನು ಕಡಿಮೆ ಮಾಡಬಹುದು.