ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು
ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸುವ, ಯಾರದ್ದೋ ಸ್ವತ್ತನ್ನು ಮತ್ತ್ಯಾರಿಗೋ ಮಾರಾಟ ಮಾಡುವ ಹಾಗೂ ಒಂದೇ ಆಸ್ತಿಯನ್ನು ಹಲವರಿಗೆ ಮಾರಾಟ ಮಾಡಿ ವಂಚಿಸುವ ಅಕ್ರಮಗಳಿಗೆ ಸದ್ಯದಲ್ಲೇ ಸಂಪೂರ್ಣ ಕಡಿವಾಣ ಬೀಳಲಿದೆ. ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ 'ಬ್ಲಾಕ್‌ಚೈನ್ ತಂತ್ರಜ್ಞಾನ'ವನ್ನು ಅನುಷ್ಠಾನಗೊಳಿಸುತ್ತಿದೆ. ಈ ಹೈಟೆಕ್ ಕ್ರಮವು ಆಸ್ತಿ ಸುರಕ್ಷತೆ ನಿಟ್ಟಿನಲ್ಲಿ ಹೊಸ ಮೈಲುಗಲ್ಲಾಗುವ ನಿರೀಕ್ಷೆ ಮೂಡಿಸಿದೆ.
ಈಗಾಗಲೇ ತುಮಕೂರು ಜಿಲ್ಲೆಯ ಗುಬ್ಬಿ ಮತ್ತು ದಾವಣಗೆರೆ ಜಿಲ್ಲೆಯ ಜಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತ 'ಕಾವೇರಿ' ತಂತ್ರಾಂಶ ಬಳಸಿ ಆಸ್ತಿ ನೋಂದಣಿ ಜಾರಿಗೆ ತರಲಾಗಿದೆ. ಶೀಘ್ರದಲ್ಲೇ ಕುಂದಾಪುರ, ಶಿರಸಿ, ಶಿಡ್ಲಘಟ್ಟ, ಹೊಸದುರ್ಗ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೂ ವಿಸ್ತರಿಸಲಾಗುವುದು.
ಇ-ಆಡಳಿತ ಇಲಾಖೆಯು ಕಾನ್ಪುರದ ಐಐಟಿ ಸಹಯೋಗದಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನದೊಂದಿಗೆ 'ಕಾವೇರಿ' ತಂತ್ರಾಂಶವನ್ನು ಸಂಯೋಜಿಸಲಾಗಿದೆ. ಆಸ್ತಿ ಅಕ್ರಮ ತಡೆಯಲು ಈ ತಂತ್ರಜ್ಞಾನವು ತುಂಬಾ ಸಹಕಾರಿಯಾಗಿದೆ. ಒಂದೇ ಒಂದು ಇಂಚು ಜಾಗವನ್ನೂ ಅನ್ಯರು ಕಬಳಿಸಲು ಸಾಧ್ಯವೇ ಇಲ್ಲ. ಬೋಗಸ್ ದಾಖಲೆಗಳನ್ನು ಸೃಷ್ಟಿಸಿ, ಸರಕಾರಿ ಭೂಮಿಯನ್ನು ಲಪಟಾಯಿಸಲೂ ಆಗುವುದಿಲ್ಲ.
ಪ್ರಕ್ರಿಯೆ ಹೇಗಿರುತ್ತದೆ?
ಆಸ್ತಿ ನೋಂದಣಿ ಪ್ರಕ್ರಿಯೆಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಆಗಮಿಸುವ ಮಾರಾಟಗಾರರು ಮತ್ತು ಖರೀದಿದಾರರಿಂದ ಆಧಾರ್ ಸಂಖ್ಯೆ ಪಡೆದು, 'ಕಾವೇರಿ ಕೀ' ಕಾರ್ಡ್ ಅನ್ನು ಸೃಜಿಸಿ ಕೊಡಲಾಗುತ್ತದೆ. ಇದು ಎಟಿಎಂ ಕಾರ್ಡ್ ಮಾದರಿಯಲ್ಲೇ ಇರುತ್ತದೆ. ಆಸ್ತಿ ನೋಂದಾಯಿಸಲು ಉದ್ದೇಶಿಸಿರುವ ಅಥವಾ ಈಗಾಗಲೇ ಆಸ್ತಿ ಹೊಂದಿರುವ ವ್ಯಕ್ತಿಗಳಿಗೆ ಕಾರ್ಡ್ ನೀಡಲಾಗುತ್ತದೆ. ಬಳಿಕ ಕಾರ್ಡ್ ಅನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇ-ಕೆವೈಸಿ ಪ್ರಕ್ರಿಯೆಯೊಂದಿಗೆ ದೃಢೀಕರಿಸಲಾಗುತ್ತದೆ. ಇದರಲ್ಲಿ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ ಮತ್ತು ಬಯೋಮೆಟ್ರಿಕ್ ದಾಖಲಿಸಲಾಗುತ್ತದೆ.
ಆಸ್ತಿ ಮಾರಾಟ ಮಾಡಿದ ಮಾಲೀಕರು ಹಾಗೂ ಖರೀದಿದಾರರ ಹೆಸರು, ಆಸ್ತಿ ಗುರುತಿನ ಸಂಖ್ಯೆಯು ಚಿಪ್ ಹೊಂದಿರುವ ಸ್ಮಾರ್ಟ್‌ಕಾರ್ಡ್‌ನಲ್ಲಿ ಮುದ್ರಿತವಾಗುತ್ತದೆ. ಜತೆಗೆ ಇಬ್ಬರಿಗೂ ಪ್ರತ್ಯೇಕ ಪಾಸ್‌ವರ್ಡ್ ನೀಡಲಾಗುತ್ತದೆ. ಬಳಿಕ ಇ-ಕೆವೈಸಿ ಮೂಲಕ ದೃಢೀಕರಿಸಲಾಗುತ್ತದೆ. ದಸ್ತಾವೇಜುಗಳ ನೋಂದಣಿ ಸಂದರ್ಭದಲ್ಲಿ ಬಯೋಮೆಟ್ರಿಕ್ ಪಡೆಯಲಾಗುತ್ತದೆ. ಬೆರಳಚ್ಚು, ಅಕ್ಷಿಪಟಲ ಪಡೆದು ನೈಜ ಮಾಲೀಕರೇ ಅಥವಾ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ.
ಪಾಸ್‌ವರ್ಡ್ ಹಾಕಲೇಬೇಕುಆಸ್ತಿ ನೋಂದಣಿ ಪ್ರಕ್ರಿಯೆ, ಖರೀದಿ ಮತ್ತು ಮಾರಾಟದ ವಿವರವು ಕಾವೇರಿ ಕೀ ಕಾರ್ಡ್‌ನಲ್ಲಿ ದಾಖಲಾಗುತ್ತದೆ. ಸ್ವತ್ತುಗಳಿಗೆ ಸಂಬಂಧಿಸಿದ ಪ್ರತಿಯೊಂದು ವರ್ಗಾವಣೆಯೂ ಕಾರ್ಡ್‌ನಲ್ಲಿ ದಾಖಲಾಗುತ್ತಾ ಹೋಗುತ್ತದೆ. ಆಸ್ತಿ ಮಾರಾಟ ಅಥವಾ ಖರೀದಿಯ ದಸ್ತಾವೇಜುಗಳ ನೋಂದಣಿಗೆ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಈ ಕಾರ್ಡ್ ಕೊಂಡೊಯ್ಯುವುದು ಕಡ್ಡಾಯ. ಆಸ್ತಿ ಮಾಲೀಕರು ಪಾಸ್‌ವರ್ಡ್ ನಮೂದಿಸಿದರಷ್ಟೇ ನೋಂದಣಿ ಪ್ರಕ್ರಿಯೆ ಮಾಡಲಾಗುತ್ತದೆ. ಇಲ್ಲವಾದಲ್ಲಿ ನೋಂದಣಿ ಸಾಧ್ಯವಾಗುವುದಿಲ್ಲ.
ಕೃಷಿ ಭೂಮಿ, ವಾಣಿಜ್ಯ ಮತ್ತು ವಸತಿ ಸ್ವತ್ತುಗಳ ಮಾಲೀಕರಿಗೆ 'ಕಾವೇರಿ ಕೀ' ಕಾರ್ಡ್ ನೀಡಲಾಗುತ್ತಿದೆ. ಮಾಲೀಕನ ಹೆಸರಿನಲ್ಲಿರುವ ಪ್ರತಿಯೊಂದು ಆಸ್ತಿಯ ವಿವರವೂ ಕಾರ್ಡ್‌ನಲ್ಲಿ ದಾಖಲಾಗಿರುತ್ತದೆ. ಮಾರಾಟ, ಖರೀದಿ, ಗುತ್ತಿಗೆ, ಅಡಮಾನ, ಉಡುಗೊರೆ ಸೇರಿದಂತೆ 48 ರೀತಿಯ ವಹಿವಾಟುಗಳು ಇದರಲ್ಲಿರುತ್ತವೆ. ಸ್ವತ್ತಿನ ಮೇಲೆ ಸಾಲ ಬಾಕಿ ಇದ್ದರೆ, ಅದು ಕೂಡ ಗೊತ್ತಾಗುತ್ತದೆ.
ಅತ್ಯುತ್ತಮ ಪ್ರತಿಕ್ರಿಯೆ
ಪ್ರಾಯೋಗಿಕ ಅನುಷ್ಠಾನದಲ್ಲಿ ಈ ವಿನೂತನ ತಂತ್ರಜ್ಞಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗುಬ್ಬಿ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಇದುವರೆಗೆ ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ 700ಕ್ಕೂ ಅಧಿಕ ದಸ್ತಾವೇಜುಗಳನ್ನು ನೋಂದಣಿ ಮಾಡಲಾಗಿದೆ. 1000ಕ್ಕೂ ಅಧಿಕ ಕಾವೇರಿ ಕೀ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಜಗಳೂರಿನಲ್ಲಿ 500 ಕಾರ್ಡ್‌ಗಳನ್ನು ನೀಡಲಾಗಿದೆ.
ಅಕ್ರಮ ತಡೆ ಹೇಗೆ?
- ಆಸ್ತಿ ವರ್ಗಾವಣೆಯ ಪ್ರತಿಯೊಂದು ಪ್ರಕ್ರಿಯೆಯೂ 'ಕಾವೇರಿ' ಕೀ ಕಾರ್ಡ್‌ನಲ್ಲಿ ದಾಖಲಾಗುತ್ತದೆ
- ದಸ್ತಾವೇಜುಗಳ ನೋಂದಣಿ ಮಾಹಿತಿ 5 ಪ್ರತ್ಯೇಕ ಸರ್ವರ್‌ಗಳಲ್ಲಿ ದಾಖಲಾಗುವುದರಿಂದ ಟ್ಯಾಂಪರ್ ಅಸಾಧ್ಯ
- ಆಸ್ತಿ ವರ್ಗಾವಣೆ ಪ್ರಕ್ರಿಯೆಯ ಟ್ರ್ಯಾಕಿಂಗ್ ಮಾಡುವುದು ಸುಲಭ
ಒಟಿಪಿ ವ್ಯವಸ್ಥೆಗೆ ಬ್ರೇಕ್
ಆಸ್ತಿ ಮಾಲೀಕರು ಮತ್ತು ಖರೀದಿದಾರರ ಮೊಬೈಲ್‌ಗೆ ಒಟಿಪಿ (ಒನ್ ಟೈಂ ಪಾಸ್‌ವರ್ಡ್) ಕಳುಹಿಸಿ ದಸ್ತಾವೇಜುಗಳನ್ನು ನೋಂದಣಿ ಮಾಡುವ ಪ್ರಕ್ರಿಯೆಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸ್ಥಗಿತಗೊಳಿಸಿದೆ. ಒಟಿಪಿ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದ ಕಾರಣ ನೋಂದಣಿ ಪ್ರಕ್ರಿಯೆಗೆ ಅಡಚಣೆ ಉಂಟಾಗುತ್ತಿತ್ತು. ಇದರಿಂದ ದಸ್ತಾವೇಜುಗಳ ನೋಂದಣಿಯೂ ವಿಳಂಬವಾಗುತ್ತಿತ್ತು.